×
Ad

ಬಳ್ಳಾರಿ | ಸಂಸದ, ಇಬ್ಬರು ಶಾಸಕರ ಕಚೇರಿ, ನಿವಾಸಗಳ ಮೇಲೆ ಈ.ಡಿ. ದಾಳಿ

Update: 2025-06-11 09:58 IST

ಬಳ್ಳಾರಿ: ಜಿಲ್ಲೆಯ ಓರ್ವ ಸಂಸದ, ಇಬ್ಬರು ಶಾಸಕರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ( ಇ.ಡಿ)ವು ಬುಧವಾರ ಮುಂಜಾನೆ ದಾಳಿ ನಡೆಸಿದೆ.

ಸಂಸದ ಇ. ತುಕಾರಾಂ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಜೆ.ಎನ್ ಗಣೇಶ್, ಶಾಸಕ ಬಿ. ನಾಗೇಂದ್ರ ಅವರ ಆಪ್ತ ಗೋವರ್ಧನ್ ರೆಡ್ಡಿಯ ಮನೆ, ಕಚೇರಿಗಳ ಇಂದು ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿರುವ ಈ.ಡಿ. ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಶಾಸಕರ ಭವನದಲ್ಲಿರು ಈ ಶಾಸಕರುಗಳ ಕೊಠಡಿಯಲ್ಲೂ ಶೋಧ ನಡೆದಿದೆ ಎಂದು ತಿಳಿದುಬಂದಿದೆ.

 

ಸಂಡೂರು ಪಟ್ಟಣದ ಬಿಕೆಜಿ ಹೌಸ್ ಏರಿಯಾದಲ್ಲಿರುವ ಸಂಸದ ಇ.ತುಕರಾಂ ನಿವಾಸವನ್ನು ಇಂದು ಮುಂಜಾನೆ ಪ್ರವೇಶಿಸಿದ 20ಕ್ಕೂ ಅಧಿಕ ಈ.ಡಿ. ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿದೆ.

ಯಾವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆರಿಸಿ ಬಂದಿರುವ ಈ ಜನಪ್ರತಿನಿಧಿಗಳ ನಿವಾಸಗಳ ಮೇಲೆ ದಾಳಿ ನಡೆದಿದೆ ಎಂಬುದು ಖಚಿತಗೊಂಡಿಲ್ಲ. ಆದರೆ, ನಾಗೇಂದ್ರ ಆಪ್ತ ಗೋವರ್ಧನ್ ರೆಡ್ಡಿ ಮನೆ ಮೇಲೆ ದಾಳಿ ನಡೆದಿರುವುದರಿಂದ ಇದು ವಾಲ್ಮೀಕಿ ನಿಗಮದ ಹಗರಣದ ತನಿಖೆಯ ಭಾಗವಾಗಿರಬಹುದು ಎಂದು ಹೇಳಲಾಗುತ್ತಿದೆ.

ವಾಲ್ಮೀಕಿ ನಿಗಮದ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಳಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಈ ನಡುವೆ ವಿಜಯನಗರದಲ್ಲಿ ಕೂಡ್ಲಿಗಿ ಶಾಸಕ ಡಾ.ಎನ್.ಟಿ ಶ್ರೀನಿವಾಸ್ ಅವರ ನಿವಾಸದ ಮೇಲೆ ಇಂದು ಮುಂಜಾನೆ ಈ.ಡಿ ದಾಳಿ ನಡೆದಿದೆ.

ಕೂಡ್ಲಿಗಿ ತಾಲೂಕಿನ ನರಸಿಂಹಗಿರಿಯಲ್ಲಿರುವ ಶಾಸಕರ ಮನೆಗೆ ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಆಗಮಿಸಿದ ಈ.ಡಿ. ಅಧಿಕಾರಿಗಳು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News