ಬಳ್ಳಾರಿ | ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ
ವೀರ ನಾರಿಯ ಜೀವನದಿಂದ ಪ್ರೇರಣೆ ಪಡೆಯೋಣ : ಮುಂಡರಗಿ ನಾಗರಾಜ
ಬಳ್ಳಾರಿ: ಬ್ರಿಟಿಷರ ವಿರುದ್ಧ ಹೋರಾಡಿ ಹೆಮ್ಮೆಯ ಇತಿಹಾಸ ನಿರ್ಮಿಸಿದ ವೀರ ನಾರಿ ಕಿತ್ತೂರು ರಾಣಿ ಚೆನ್ನಮ್ಮ ಅವರು ಅನೇಕ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ ಎಂದು ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.
ನಗರದ ಡಾ.ರಾಜ್‌ಕುಮಾರ್ ರಸ್ತೆ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜೀವನದಲ್ಲಿ ಹೋರಾಟ ಮತ್ತು ಆತ್ಮಬಲ ಇರಬೇಕು. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಚಿಂತನೆ ಹಾಗೂ ಮೌಲ್ಯಗಳನ್ನು ಪಾಲಿಸಿಕೊಂಡು ಮೌಲ್ಯಯುತ ಬದುಕು ರೂಪಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಉಪಾಧ್ಯಕ್ಷ ಎಚ್. ಲಕ್ಷ್ಮಣ ಅವರು ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರು ಕೇವಲ ವೀರ ಮಹಿಳೆಯಲ್ಲ, ಸಮಾಜ ಪರಿವರ್ತನೆಗೆ ಪ್ರೇರಣೆಯಾದ ನಾಯಕಿ. ಅವರ ತ್ಯಾಗವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಅವರು, ಬಸವಣ್ಣನವರ ಸಮಾನತೆಯ ನೀತಿಗಳನ್ನು ಅಳವಡಿಸಿಕೊಂಡಿದ್ದರೆ ವಿದೇಶೀ ಆಳ್ವಿಕೆಗೆ ಅವಕಾಶವಿರುತ್ತಿರಲಿಲ್ಲ. ಇಂದು ಜಾತಿ-ಧರ್ಮ ಬೇಧ ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಎಂದು ಹೇಳಿದರು.
ಡಾ. ಕಲಾವತಿ ಬಿ.ಜಿ (ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು) ಅವರು ಕಿತ್ತೂರು ರಾಣಿ ಚೆನ್ನಮ್ಮ ಅವರ ಜೀವನಚರಿತ್ರೆ ವಿವರಿಸಿ, ಅವರು ಕೇವಲ ತಮ್ಮ ಸಮುದಾಯದ ಪರವಾಗಿ ಅಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ಫೂರ್ತಿದಾಯಕ ನಾಯಕಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕು. ಜಯಲಕ್ಷ್ಮೀ ಎಂ.ಎಸ್. ವಚನ ಸಂಗೀತ ಪ್ರಸ್ತುತಪಡಿಸಿದರು. ಸಂವಿಧಾನ ಪ್ರತಿಜ್ಞಾವಿಧಿ ನೆರವೇರಿಸಲಾಯಿತು.
ಜಯಂತಿ ಅಂಗವಾಗಿ ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾದ ಮೆರವಣಿಗೆ ಇಂದಿರಾ ವೃತ್ತ, ಡಾ.ರಾಜ್‌ಕುಮಾರ್ ರಸ್ತೆ ಮೂಲಕ ಸಾಗಿಕೊಂಡು ಸಾಂಸ್ಕೃತಿಕ ಸಮುಚ್ಚಯದಲ್ಲಿ ಸಂಪನ್ನವಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಿ.ನಾಗರಾಜ, ಬಳ್ಳಾರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಗೋನಾಳ್ ಎಂ.ನಾಗಭೂಷಣ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪಂಪನಗೌಡ, ಹಾಗೂ ಅನೇಕ ಗಣ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.