×
Ad

ಬಳ್ಳಾರಿ | ಕಾರ್ಮಿಕ ಇಲಾಖೆಯಿಂದ ವಿವಿಧೆಡೆ ದಾಳಿ : ಮೂರು ಬಾಲಕಾರ್ಮಿಕರ ರಕ್ಷಣೆ

Update: 2025-10-29 20:34 IST

ಬಳ್ಳಾರಿ : ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಬಳ್ಳಾರಿ ನಗರದ ತಾಳೂರು ರಸ್ತೆ, ರೇಣುಕ ನಗರ, ದುರ್ಗಮ್ಮ ಗುಡಿ ಹತ್ತಿರದ ವಿವಿಧ ಗ್ಯಾರೇಜ್, ಮೆಕ್ಯಾನಿಕ್ ಶಾಪ್, ಬೇಕರಿ ಇತ್ಯಾದಿ ಉದ್ದಿಮೆಗಳ ಮೇಲೆ ಟಾಸ್ಕ್ ಪೋರ್ಸ್ ಸಮಿತಿ ಮೂಲಕ ಅನಿರೀಕ್ಷಿತ ದಾಳಿ ನಡೆಸಿ ಕೆಲಸ ನಿರ್ವಹಿಸುತ್ತಿದ್ದ 3 ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆ.

ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಹಾಗೂ ಪ್ಯಾನ್-ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಅವರ ಅಧ್ಯಕ್ಷತೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಿ ಈ ದಾಳಿ ನಡೆಸಲಾಗಿದೆ.

ವಶಕ್ಕೆ ಪಡೆದುಕೊಂಡ ಮಕ್ಕಳ ಹೇಳಿಕೆಗಳನ್ನು ಸ್ಥಳದಲ್ಲಿ ಪಡೆದು ನಂತರ ಶಿಕ್ಷಣ ಇಲಾಖೆಗೆ ಒಪ್ಪಿಸಲಾಯಿತು. ಇದೇ ವೇಳೆ ಎಲ್ಲಾ ಉದ್ದಿಮೆಗಳ ಮಾಲಕರಿಗೆ ಕರಪತ್ರ ಹಾಗೂ ಪೋಸ್ಟರ್‌ಗಳನ್ನು ನೀಡುವುದರ ಮೂಲಕ ಬಾಲಕಾರ್ಮಿಕ ಪದ್ಧತಿ ಕುರಿತು ಜಾಗೃತಿ ಮೂಡಿಸಲಾಯಿತು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾಧಿಕಾರಿ ಮೌನೇಶ್ ಅವರು ತಿಳಿಸಿದ್ದಾರೆ.

ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಬಳ್ಳಾರಿಯ 1ನೇ ವೃತ್ತದ ಕಾರ್ಮಿಕ ನಿರೀಕ್ಷಕ ರಮೇಶ್, ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಸೈಯದ್ ಭಾಷಾ, ಆರೋಗ್ಯ ಇಲಾಖೆಯ ಮುಸ್ತಾಕ್ ಅಹಮದ್, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳಾದ ಚಂದ್ರಕಲಾ, ಕಿರಣ್ ಕುಮಾರ್, ರೀಚ್ ಸಂಸ್ಥೆಯ ಸಂಯೋಜಿಕಿ ಲಕ್ಷ್ಮೀದೇವಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News