×
Ad

ಬಳ್ಳಾರಿ | ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ : ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

Update: 2025-10-04 22:32 IST

ಬಳ್ಳಾರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಬೇಕಾಗಿರುವುದರಿಂದ, ಅರ್ಹ ಶಿಕ್ಷಕರಿಂದ ನೋಂದಾಯಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿರುವ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹತಾ ದಿನಾಂಕ 2025ರ ನವೆಂಬರ್ 1ಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿಯ ನವೀಕರಣ ಕಾರ್ಯ ಪ್ರಾರಂಭಗೊಂಡಿದೆ. ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಶಿಕ್ಷಕರೂ ಸಹ ನಮೂನೆ–19ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 6 ಕೊನೆಯ ದಿನವಾಗಿದ್ದು, ಕರಡು ಮತದಾರರ ಪಟ್ಟಿಯನ್ನು ನವೆಂಬರ್ 25ರಂದು ಪ್ರಕಟಿಸಲಾಗುತ್ತದೆ. ಆ ದಿನದಿಂದ ಡಿಸೆಂಬರ್ 10ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ಅಂತಿಮ ಮತದಾರರ ಪಟ್ಟಿಯನ್ನು ಡಿಸೆಂಬರ್ 30ರಂದು ಪ್ರಕಟಿಸಲಾಗುವುದು.

ಭಾರತದ ಪ್ರಜೆಯಾಗಿರುವ, ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿರುವ ಮತ್ತು 2025ರ ನವೆಂಬರ್ 1ರೊಳಗೆ ಕನಿಷ್ಠ ಮೂರು ವರ್ಷಗಳ ಕಾಲ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ವೃತ್ತಿಯಲ್ಲಿ ನಿರತರಾಗಿರುವ ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಹರಾಗಿದ್ದಾರೆ.

ಅರ್ಜಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಿದರೆ ಪರಿಗಣಿಸಲಾಗುವುದಿಲ್ಲ. ಸಂಸ್ಥೆಯ ಮುಖ್ಯಸ್ಥರು ತಮ್ಮ ಸಂಸ್ಥೆಯ ಶಿಕ್ಷಕರ ಅರ್ಜಿಗಳನ್ನು ಒಟ್ಟಾಗಿ ಕಳುಹಿಸಬಹುದು. ತಪ್ಪು ಮಾಹಿತಿ ನೀಡಿದರೆ ಪ್ರಜಾಪ್ರಾತಿನಿಧ್ಯ ಅಧಿನಿಯಮ 1950ರ 31ನೇ ವಿಧಿಯ ಪ್ರಕಾರ ಶಿಕ್ಷೆಗೆ ಒಳಗಾಗಬಹುದು.

ಅರ್ಜಿಯೊಂದಿಗೆ ಬೋಧನಾ ವೃತ್ತಿಯಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿರುವ ಕುರಿತು ಸಂಬಂಧಿತ ಸಂಸ್ಥೆಯಿಂದ ಪ್ರಮಾಣಪತ್ರವನ್ನು ಸಲ್ಲಿಸಬೇಕು. ವಿಚಾರಣೆಗೆ ಹಾಜರಾಗದಿದ್ದರೆ ಅಥವಾ ದಾಖಲೆಗಳನ್ನು ಸಲ್ಲಿಸದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಬಲ್ಕ್ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಆಯೋಗವು ಶೀಘ್ರದಲ್ಲೇ ಇಆರ್‌ಎಂಎಸ್ ಪೋರ್ಟಲ್‌ನಲ್ಲಿ ನಮೂನೆ–19 ಅರ್ಜಿಗಳನ್ನು ಅಳವಡಿಸಲು ಉದ್ದೇಶಿಸಿದೆ.

ಅರ್ಹ ಶಿಕ್ಷಕರು ಹೆಚ್ಚಿನ ಆಸಕ್ತಿ ತೋರಿಸಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ಆಯುಕ್ತ ಪಿ.ಎಸ್. ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News