ಬಳ್ಳಾರಿ | ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಫಲಾನುಭವಿಗಳಿಗೆ ತಲುಪಬೇಕು : ಡಿಸಿ ನಾಗೇಂದ್ರ ಪ್ರಸಾದ್ ಕೆ.
ಬಳ್ಳಾರಿ : ಪರಿಶಿಷ್ಟ ಜಾತಿ–ಪಂಗಡಗಳ ಆರ್ಥಿಕ ಸ್ಥಿತಿ ಸುಧಾರಣೆಯಿಗಾಗಿ ರಾಜ್ಯ ಸರ್ಕಾರ ಆಯವ್ಯಯದಲ್ಲಿ ವಿಶೇಷ ಅನುದಾನ ಮೀಸಲಿಟ್ಟಿದ್ದು, ಆ ಮೊತ್ತವನ್ನು ಅವರಿಗಾಗಿಯೇ ಶೇ.100ರಷ್ಟು ಬಳಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ವರ್ಗದ ಫಲಾನುಭವಿಗಳ ವೈಯಕ್ತಿಕ ಅಭಿವೃದ್ಧಿ, ಕೃಷಿ–ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ನೀಡುವ ಸೌಲಭ್ಯಗಳ ವಿತರಣೆ ವಿಳಂಬವಾಗಬಾರದು. ಪ್ರೋತ್ಸಾಹ ನೆರವು ನೇರವಾಗಿ ಯುವ ರೈತರಿಗೆ ತಲುಪಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಎಲ್ಲಾ ಇಲಾಖೆಗಳು ಎಸ್‌ಸಿಎಸ್‌ಪಿ/ಟಿಎಸ್‌ಪಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಿ ಪ್ರಗತಿ ನಿಗಾ ಮಾಡಲಾಗುವುದು. ನಂತರ ರಾಜ್ಯ ಮಟ್ಟದಲ್ಲಿ ಅಂತಿಮ ಪರಿಶೀಲನೆ ನಡೆಯಲಿದೆ ಎಂದು ತಿಳಿಸಿದರು.
ಬಳಕೆಯಾಗದ ಅನುದಾನ ಮರುಹಂಚಿಕೆ :
ಹಂಚಿಕೆ ಮಾಡಿದ ಅನುದಾನವನ್ನು ಮಾರ್ಚ್ ಮುಗಿಯುವೊಳಗೆ ಖರ್ಚು ಮಾಡಲೇಬೇಕು. ಲೆಕ್ಕ ಪರಿಶೋಧನೆ ನಂತರ ಮುಂದಿನ ವರ್ಷಕ್ಕೆ ರಾಜ್ಯದ ಹಣ ಸೇರಬಹುದು, ಆದರೆ ಕೇಂದ್ರದ ಹಣ ಮರಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅನುದಾನ ಬಳಕೆ ನಿರ್ಲಕ್ಷಿಸಿದರೆ ಶಿಸ್ತು ಕ್ರಮ ತಪ್ಪದು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಹಾರೀಸ್ ಸುಮೇರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಮೋದಿನ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.