×
Ad

ಬಳ್ಳಾರಿ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ವೇಗ ನೀಡಿ: ಡಿಸಿ ನಾಗೇಂದ್ರ ಪ್ರಸಾದ್ ಕೆ.

Update: 2025-09-30 20:07 IST

ಬಳ್ಳಾರಿ : ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯದಲ್ಲಿ ಗುರುತಿಸಲಾದ 3.85 ಲಕ್ಷ ಮನೆಗಳ ಪೈಕಿ 1.45 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದ್ದು ಈವರೆಗೆ ಶೇ.38 ರಷ್ಟು ಪ್ರಗತಿಯಾಗಿದೆ. ರಾಜ್ಯದ ಕ್ರಮಾಂಕದಲ್ಲಿ 15 ನೇ ಸ್ಥಾನದಲ್ಲಿದ್ದೇವೆ. ಇನ್ನೂ ಸಮೀಕ್ಷಾ ಕಾರ್ಯಕ್ಕೆ ವೇಗ ನೀಡಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಸಮೀಕ್ಷೆಯ ನೋಡಲ್ ಅಧಿಕಾರಿಗಳು, ವರ್ಚುವಲ್ ಮೂಲಕ ಸಂಡೂರು ತಾಲ್ಲೂಕು ತಹಶೀಲ್ದಾರರೊಂದಿಗೆ ಸಮೀಕ್ಷೆಯ ಪ್ರಗತಿ ಸಭೆ ನಡೆಸಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯ ಆರಂಭಗೊಂಡು 8 ದಿನಗಳಾಗಿವೆ. ಇನ್ನುಳಿದ ದಿನಗಳಲ್ಲಿ ನಿಗದಿತ ಗುರಿ ತಲುಪಲು ಮತ್ತು ಜಿಲ್ಲೆಯನ್ನು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿರಿಸಲು ಸೂಕ್ತ ತಾಂತ್ರಿಕ ಯೋಜನೆ ರೂಪಿಸಿ ಗಣತಿದಾರರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಎಂದು ಹೇಳಿದರು.

ಜಿಲ್ಲೆಯಲ್ಲಿ ಕಂಪ್ಲಿ, ಕುರುಗೋಡು, ಸಿರುಗುಪ್ಪ ತಾಲ್ಲೂಕುಗಳು ಸಮೀಕ್ಷಾ ಕಾರ್ಯ ಅಂತ್ಯಕ್ಕೆ ನಿಗದಿತ ಗುರಿ ತಲುಪಲಿವೆ. ಸಂಡೂರು ಮತ್ತು ಬಳ್ಳಾರಿ ತಾಲ್ಲೂಕುಗಳಿಂದ ನಿರೀಕ್ಷೆಗಿಂತ ಫಲಿತಾಂಶ ಲಭಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಅಧಿಕಾರಿಗಳು ಜೊತೆಗೂಡಿ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮಮದ್ ಹ್ಯಾರೀಸ್ ಸುಮೈರ್ ಅವರು ಮಾತನಾಡಿದರು.

ತಾಲ್ಲೂಕುವಾರು ಪ್ರಗತಿ:

• ಬಳ್ಳಾರಿ: 1.75 ಲಕ್ಷ ಮನೆಗಳಲ್ಲಿ 53 ಸಾವಿರ ಪೂರ್ಣ

• ಕಂಪ್ಲಿ: 33 ಸಾವಿರ ಮನೆಗಳಲ್ಲಿ 16 ಸಾವಿರ ಪೂರ್ಣ

• ಕುರುಗೋಡು: 27 ಸಾವಿರ ಮನೆಗಳಲ್ಲಿ 15 ಸಾವಿರ ಪೂರ್ಣ

• ಸಂಡೂರು: 79 ಸಾವಿರ ಮನೆಗಳಲ್ಲಿ 27 ಸಾವಿರ ಪೂರ್ಣ

• ಸಿರುಗುಪ್ಪ: 65 ಸಾವಿರ ಮನೆಗಳಲ್ಲಿ 35 ಸಾವಿರ ಪೂರ್ಣ

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮುಹಮ್ಮದ್ ಎನ್.ಝುಬೇರ್, ಸಹಾಯಕ ಆಯುಕ್ತ ಪಿ.ಪ್ರಮೋದ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಡಿಎಂಎಫ್ ವಿಶೇಷಾಧಿಕಾರಿ ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News