ಬಳ್ಳಾರಿ | ವಿಪತ್ತು ನಿರ್ವಹಣೆಗೆ ಅಧಿಕಾರಿಗಳ ಸಕಾಲಿಕ ಸಿದ್ಧತೆ ಅಗತ್ಯ : ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್
ಬಳ್ಳಾರಿ: ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರೂ ಆಗಿರುವ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಾಧಿಕಾರದ ಮಹತ್ವ ಅರಿತುಕೊಂಡಾಗ ಮಾತ್ರ ಅನಿರೀಕ್ಷಿತವಾಗಿ ಸಂಭವಿಸುವ ಯಾವುದೇ ವಿಪತ್ತನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಯಾದ ನಾಗೇಂದ್ರ ಪ್ರಸಾದ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ 2025–26ನೇ ಸಾಲಿನ ಮುಂಗಾರು ಹಂಗಾಮಿನ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲಾಯಿತು.
ವಿಪತ್ತು ಎನ್ನುವುದು ಸಾರ್ವಜನಿಕ ಜೀವನದಲ್ಲಿ ಅನಿರೀಕ್ಷಿತ ಹಾಗೂ ಗಂಭೀರ ಪರಿಣಾಮ ಉಂಟುಮಾಡುವ ಘಟನೆ. ಹಾಗಾಗಿ ಪ್ರಾಧಿಕಾರದ ಸದಸ್ಯರಾಗಿರುವ ಅಧಿಕಾರಿಗಳು ನಿಯಮಿತವಾಗಿ ಅಣಕು ಪ್ರದರ್ಶನ ಹಾಗೂ ತರಬೇತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಯಾವುದೇ ಗಂಭೀರ ಹಾನಿ ಸಂಭವಿಸದಿದ್ದರೂ, ಕೆಲವು ಭಾಗಗಳಲ್ಲಿ ಭತ್ತದ ಬೆಳೆಗೆ ದುಂಡಾಣು ಮಚ್ಚೆ ರೋಗ ಕಂಡುಬಂದಿರುವುದಾಗಿ ತಿಳಿಸಿದ್ದಾರೆ. ಬೆಳೆಹಾನಿ ಪ್ರಮಾಣ ಯಾವುದೇ, ಇರಲಿ ಒಂದು ಎಕರೆಯಾದರೂ ಅಥವಾ ನೂರು ಎಕರೆಯಾದರೂ ಅದನ್ನು ನಿರ್ಲಕ್ಷಿಸದೆ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅದೇ ರೀತಿ ಬೆಳೆಹಾನಿ, ಸಾರ್ವಜನಿಕ ಕಟ್ಟಡಗಳು, ಕುಡಿಯುವ ನೀರು, ಆರೋಗ್ಯ ಸೌಲಭ್ಯ ಇತ್ಯಾದಿ ಸಮಸ್ಯೆಗಳ ಕುರಿತಂತೆ ಪತ್ರಿಕೆಗಳಲ್ಲಿ ವರದಿಯಾದಲ್ಲಿ, ಅಂತಹ ವಿಷಯಗಳನ್ನು ಆದ್ಯತೆಯಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಶಾಲೆ ಮತ್ತು ಅಂಗನವಾಡಿ ಕೊಠಡಿಗಳ ಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲು, ದುರ್ಬಲ ಕಟ್ಟಡಗಳನ್ನು ಗುರುತಿಸಿ ವರದಿ ನೀಡಲು ಡಿಡಿಪಿಐ, ಜೆಸ್ಕಾಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದರು. ಸಾಂಕ್ರಾಮಿಕ ರೋಗಗಳ ತಡೆ ಹಾಗೂ ಔಷಧ ದಾಸ್ತಾನು ಸಿದ್ಧತೆಯ ಕುರಿತಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಎಸ್‌ಡಿಆರ್‌ಎಫ್ ಅಡಿಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಅಗ್ನಿಶಾಮಕ ದಳವು ಸದಾ ಪೂರ್ವಸಿದ್ಧತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಸಹಾಯಕ ಆಯುಕ್ತ ಪಿ.ಪ್ರಮೋದ್, ಕೃಷಿ ಜಂಟಿ ನಿರ್ದೇಶಕ ಸೋಮಸುಂದರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್ ಸೇರಿದಂತೆ ತೋಟಗಾರಿಕೆ, ಡಿಯುಡಿಸಿ, ಜೆಸ್ಕಾಂ, ಡಿಡಿಪಿಐ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.