ಬಳ್ಳಾರಿ | ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ʼಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿ ಜಾಥಾʼ
ಬಳ್ಳಾರಿ: ನಗರದ ಮೋತಿ ವೃತ್ತದಿಂದ ಬೀದರ್‌ವರೆಗೆ ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ “ಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿ ಜಾಥಾ” ಆಯೋಜಿಸಲಾಯಿತು.
ಈ ಜಾಥಾ ಬಳ್ಳಾರಿಯಿಂದ ಆರಂಭವಾಗಿ ಹೊಸಪೇಟೆ, ಕೊಪ್ಪಳ ಮುಖಾಂತರ ಕಲಬುರಗಿ ತನಕ ನಡೆಯಲಿದ್ದು, ಕಲ್ಯಾಣ ಕರ್ನಾಟಕಕ್ಕೆ ಸೇರಿರುವ ಏಳು ಜಿಲ್ಲೆಗಳ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಉದ್ದೇಶ ಹೊಂದಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹಿರ್ ಹುಸೇನ್ ತಿಳಿಸಿದ್ದಾರೆ.
ನಗರದ ಮೋತಿ ಸರ್ಕಲ್‌ನಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳಾದರೂ ಕಲ್ಯಾಣ ಕರ್ನಾಟಕ ಭಾಗ ಇಂದು ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾಗಿಯೇ ಉಳಿದಿದೆ. ಸಂವಿಧಾನದ 98ನೇ ತಿದ್ದುಪಡಿ ಮೂಲಕ 2013ರಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆತಿದ್ದರೂ, “ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ”ಯ ಹೆಸರಿನಲ್ಲಿ ಸ್ಥಾಪಿಸಿದ ನಿಗಮದ ಮೂಲಕ ಕಳೆದ 12 ವರ್ಷಗಳಲ್ಲಿ ಸುಮಾರು 25,000 ಕೋಟಿ ರೂ. ಅನುದಾನ ಬಿಡುಗಡೆಯಾದರೂ ಅಭಿವೃದ್ಧಿಯ ಫಲಿತಾಂಶಗಳು ಜನರ ಕೈ ಸೇರಿಲ್ಲವೆಂದರು.
ಕಾರ್ಮಿಕರು ಉದ್ಯೋಗಕ್ಕಾಗಿ ಊರುಬಿಟ್ಟು ಹೊರಡುವ ಪರಿಸ್ಥಿತಿ ಮುಂದುವರಿದಿದೆ. ಯುವಕರಿಗೆ ಅರ್ಹತೆಗೆ ತಕ್ಕ ಉದ್ಯೋಗಗಳು ಸಿಗುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಕೇಂದ್ರಗಳ ಸ್ಥಾಪನೆ ಆಗಿಲ್ಲ. ಅಪೌಷ್ಟಿಕತೆಯಿಂದ ಮಕ್ಕಳ ಹಾಗೂ ಬಾಣಂತಿಯರ ಸಾವಿನ ಸರಣಿ ನಿಂತಿಲ್ಲ. ಉರಿ ಬಿಸಿಲಿನಲ್ಲಿ ದುಡಿಯುವ ರೈತರ ಸಮಸ್ಯೆಗಳು ಬಗೆಹರಿಯದೆ ಆತ್ಮಹತ್ಯೆಗಳು ನಿಂತಿಲ್ಲ. ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಹಾಗೂ ಆದಿವಾಸಿಗಳಿಗೆ ಇಂದಿಗೂ ಸಾಮಾಜಿಕ ನ್ಯಾಯ ದೊರಕಿಲ್ಲವೆಂದು ತಾಹಿರ್ ಹುಸೇನ್ ವಿಷಾದ ವ್ಯಕ್ತಪಡಿಸಿದರು.
ಪ್ರತಿ ಬಾರಿ ಹೊಸ ಯೋಜನೆಗಳ ಭರವಸೆ, ದೊಡ್ಡ ದೊಡ್ಡ ಅನುದಾನಗಳ ಘೋಷಣೆಗಳು ಕೇಳಿಬರುತ್ತಿವೆ. ಆದರೆ, ಅನುದಾನ ಎಲ್ಲಿ ಹೋಗುತ್ತಿದೆ? ಯಾರಿಗೆ ಯೋಜನೆಗಳ ಲಾಭ ತಲುಪುತ್ತಿದೆ? ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕಲ್ಯಾಣ ಕರ್ನಾಟಕ ಜನರ ಪರವಾಗಿ ಸರ್ಕಾರವನ್ನು ಎಚ್ಚರಿಸುತ್ತಿದ್ದು, ಈ ಭಾಗದ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಾಬಿಹಾ ಪಟೇಲ್, ಕೃಷ್ಣ ರೈತ ಮುಖಂಡರು, ವಿಠ್ಠಲ್ (371ಜೆ ಹೋರಾಟಗಾರ) ಸೇರಿದಂತೆ ಪಕ್ಷದ ಅನೇಕ ಸದಸ್ಯರು ಉಪಸ್ಥಿತರಿದ್ದರು.