ಬಳ್ಳಾರಿ ವಿಮಾನ ನಿಲ್ದಾಣ ಕುರಿತು ಸ್ಪಷ್ಟಪಡಿಸಿ : ವೈ.ಎಂ.ಸತೀಶ್ ಆಗ್ರಹ
ಬೆಂಗಳೂರು, ಮಾ.10: ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದೇ ಅಥವಾ ಇಲ್ಲವೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಯೋಜನೆ ಮುಂದುವರಿಯದಿದ್ದರೆ ಆರ್ಸೆಲರ್ ಮಿತ್ತಲ್ ಹಾಗೂ ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ರೈತರಿಗೆ ಹಿಂದಿರುಗಿಸಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಆಗ್ರಹಿಸಿದರು.
ವಿಧಾನಪರಿಷತ್ ಬಜೆಟ್ ಅಧಿವೇಶನದಲ್ಲಿ ಮಂಗಳವಾರ ಈ ವಿಷಯ ಪ್ರಸ್ತಾಪಿಸಿದ ಅವರು, ಬಳ್ಳಾರಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದ್ದರೂ ರಸ್ತೆಗಾಗಿ ಭೂಮಿ ಸ್ವಾಧೀನ ಮಾಡಿಲ್ಲ. ಅಧಿಕಾರಿಗಳು ಮತ್ತು ಸರ್ಕಾರದ ನಡುವಿನ ಸಮನ್ವಯದ ಕೊರತೆಯ ಉದಾಹರಣೆಯೇ ಇದು ಎಂದು ವ್ಯಂಗ್ಯವಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಿಂದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಡಿಕೆ ಬಂದಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈ ಮೂರು ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ನಡೆಸಿ ವಿಮಾನ ನಿಲ್ದಾಣವನ್ನು ಎಲ್ಲಿ ನಿರ್ಮಿಸಬೇಕು ಎಂಬ ಬಗ್ಗೆ ಶೀಘ್ರದಲ್ಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಬಳ್ಳಾರಿಯಲ್ಲಿ ಪಿಪಿಪಿ ಮಾದರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು 2010ರ ಆಗಸ್ಟ್ 3ರಂದು ಮಾರ್ಗ್ ಶ್ರಿ ಕೃಷ್ಣದೆವರಾಯ ಏರ್ಪೋರ್ಟ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಲೆಟರ್ ಆಫ್ ಅವಾರ್ಡ್ ನೀಡಲಾಗಿತ್ತು. ನಂತರ ಸರ್ಕಾರ ಮತ್ತು ಕಂಪನಿಯ ನಡುವೆ ಯೋಜನಾ ಅಭಿವೃದ್ಧಿ ಒಪ್ಪಂದಕ್ಕೂ ಸಹಿ ಹಾಕಲಾಗಿತ್ತು. ಆದರೆ ಕಂಪನಿ ಕಾಮಗಾರಿ ಪ್ರಾರಂಭಿಸದ ಹಿನ್ನೆಲೆಯಲ್ಲಿ ಒಪ್ಪಂದವನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದರು.
ಇದೀಗ ಬಳ್ಳಾರಿ ವಿಮಾನ ನಿಲ್ದಾಣವನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ನಿರ್ಮಿಸುವ ಕುರಿತು ಡಿಪಿಆರ್ ಸಿದ್ಧಪಡಿಸಲು ಸಮಾಲೋಚಕರನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮತ್ತೆ ಮಾತನಾಡಿದ ವೈ.ಎಂ. ಸತೀಶ್, ಬಳ್ಳಾರಿ ವಿಮಾನ ನಿಲ್ದಾಣ ಹಾಗೂ ಕುಡತಿನಿಯ ಆರ್ಸೆಲರ್ ಮಿತ್ತಲ್ ಯೋಜನೆಗಾಗಿ ಸ್ವಾಧೀನ ಮಾಡಿಕೊಂಡಿರುವ ಭೂಮಿಯಲ್ಲಿ ಯೋಜನೆಗಳು ಜಾರಿಯಾಗದಿದ್ದರೆ ಆ ಭೂಮಿಯನ್ನು ರೈತರಿಗೆ ಹಿಂದಿರುಗಿಸಬೇಕು. ಇಲ್ಲವಾದರೆ ಅದು ‘ಬಿಳಿ ಆನೆ’ ಆಗಲಿದೆ ಎಂದು ಎಚ್ಚರಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಎಂ.ಬಿ. ಪಾಟೀಲ್, ಸ್ವಾಧೀನಪಡಿಸಿಕೊಂಡ ಭೂಮಿಗೆ ಈಗಾಗಲೇ ಪರಿಹಾರ ನೀಡಿರುವುದರಿಂದ ಅದನ್ನು ರೈತರಿಗೆ ಹಿಂದಿರುಗಿಸಲು ಸಾಧ್ಯವಿಲ್ಲ. ವಿಮಾನ ನಿಲ್ದಾಣಕ್ಕೆ ಅಗತ್ಯವಾದ ರಸ್ತೆಗಾಗಿ ಬೇಕಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಈ ಯೋಜನೆ ಬಿಳಿ ಆನೆಯಾಗಲು ಬಿಡುವುದಿಲ್ಲ, ಅಗತ್ಯವಿದ್ದರೆ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಸ್ಮರಣೀಯವೆಂದರೆ, ಬಳ್ಳಾರಿ ಜಿಲ್ಲೆಯ ಸಿರಿವಾರ ಗ್ರಾಮದ ವ್ಯಾಪ್ತಿಯಲ್ಲಿ 2009ರಲ್ಲಿ ರೈತರ ಹಾಗೂ ವಿವಿಧ ರಾಜಕೀಯ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಸುಮಾರು 900 ಎಕರೆ ಭೂಮಿಯನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು