×
Ad

ಬಳ್ಳಾರಿ | ಕೈವಾರ ತಾತಯ್ಯ ಜಯಂತಿ ಆಚರಣೆ

ಯುವಪೀಳಿಗೆ ಶಿಕ್ಷಣದಿಂದ ಮಾತ್ರ ಮುಂಚೂಣಿಗೆ ಬರಲು ಸಾಧ್ಯ : ಪಿ.ಗಾದೆಪ್ಪ

Update: 2026-03-03 21:39 IST

ಬಳ್ಳಾರಿ : ಇಂದಿನ ಯುವಪೀಳಿಗೆ ಗುಣಮಟ್ಟದ ಶಿಕ್ಷಣ ಪಡೆದುಕೊಂಡಾಗ ಮಾತ್ರ ಮುಂಚೂಣಿಗೆ ಬರಲು ಸಾಧ್ಯ ಎಂದು ಮಹಾನಗರ ಪಾಲಿಕೆಯ ಮಹಾಪೌರ ಪಿ. ಗಾದೆಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ವಡ್ಡರಬಂಡೆಯ ಬಲಿಜ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಯೋಗಿ ನಾರೇಯಣ ಯತೀಂದ್ರ ಶ್ರೀ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಮಾನವ ಸಂದೇಶ ಸಾರಿದ ನಾರೇಯಣ ಯತೀಂದ್ರ ಅವರ ಜಯಂತಿ ಆಚರಣೆ ಅರ್ಥಪೂರ್ಣವಾಗಿದೆ. ಮಹಾನ್ ನಾಯಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಜಯಂತಿ ಕಾರ್ಯಕ್ರಮಗಳಿಗೆ ಮಹಾನಗರ ಪಾಲಿಕೆ ವತಿಯಿಂದ ವಿಶೇಷ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಮಾತನಾಡಿ, ಬಲಿಜ ಜನಾಂಗದವರು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಾಗಿ ಪಡೆದು ಇನ್ನಷ್ಟು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಕೆ.ಬಿ. ಸಿದ್ದಲಿಂಗಪ್ಪ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಕೈವಾರದ ಯೋಗಿ ನಾರೇಯಣ ಯತೀಂದ್ರ (ತಾತಯ್ಯ) ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಸಂತ, ಕವಿ ಹಾಗೂ ಕಾಲಜ್ಞಾನಿಯಾಗಿದ್ದರು. ಭಕ್ತಿ ಮಾರ್ಗ, ವೇದಾಂತ ಮತ್ತು ಸಾಮಾಜಿಕ ಸಮಾನತೆಯನ್ನು ಬೋಧಿಸಿದ ಅವರು ಕನ್ನಡ ಹಾಗೂ ತೆಲುಗು ಸಾಹಿತ್ಯದಲ್ಲಿ ಜನಪ್ರಿಯ ತತ್ವಪದಗಳನ್ನು ರಚಿಸಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಅನುಕೃಪ ರೌಡರು ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು.

ಅದ್ದೂರಿ ಮೆರವಣಿಗೆ

ಜಯಂತಿ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಬಲಿಜ ಭವನದಿಂದ ಆರಂಭವಾದ ಮೆರವಣಿಗೆ ರಾಘವೇಂದ್ರ ಚಿತ್ರಮಂದಿರ, ಇಂದಿರಾ ವೃತ್ತ, ಗಡಿಗಿ ಚೆನ್ನಪ್ಪ ವೃತ್ತ, ಮೀನಾಕ್ಷಿ ವೃತ್ತ ಮಾರ್ಗವಾಗಿ ಮರಳಿ ಬಲಿಜ ಭವನಕ್ಕೆ ತಲುಪಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಕೆ. ರಮೇಶ್ ಬುಜ್ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಸೇರಿದಂತೆ ಅನೇಕ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News