ಸಿರುಗುಪ್ಪ | ಉಚಿತ ಆರೋಗ್ಯ ತಪಾಸಣಾ ಶಿಬಿರ
ಬಳ್ಳಾರಿ : ಸಿರುಗುಪ್ಪ ಪಟ್ಟಣದಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಅನುಕೂಲವಾಗಿದ್ದು, ಇದರಿಂದ ಜನರಿಗೆ ಆರ್ಥಿಕ ಉಳಿತಾಯವಾಗುತ್ತದೆ ಎಂದು ಹರಗಿನಡೋಣಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆ, ಸಿರುಗುಪ್ಪ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಗೂ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರಮದಿಂದ ಬದುಕು ಕಟ್ಟಿಕೊಂಡಿರುವವರು ಸಮಾಜದ ಬಗ್ಗೆ ಕಾಳಜಿ ಹೊಂದಿದ್ದು, ಇಂತಹ ಉಚಿತ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಅವರ ಸಾಮಾಜಿಕ ಬದ್ಧತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
ಈ ವೇಳೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ಮಾತನಾಡಿದರು. ಸಿರುಗುಪ್ಪದ ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಮಾರ್ಗದರ್ಶನ ನೀಡಲಾಗಿದ್ದು, ಸುಮಾರು 200ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡು ಔಷಧಿ ಪಡೆದರು.
ಕಾರ್ಯಕ್ರಮದಲ್ಲಿ ಗುರು ಬಸವ ಮಠದ ಬಸವಭೂಷಣ ಸ್ವಾಮೀಜಿ, ವೈದೇಹಿ ಆಸ್ಪತ್ರೆಯ ಮಲ್ಲಿಕಾರ್ಜುನ, ಪಿಎಲ್‌ಡಿ ಬ್ಯಾಂಕ್ ವ್ಯವಸ್ಥಾಪಕ ತಿಪ್ಪಣ್ಣ ಬನಸೋಡಿ, ಉಪಾಧ್ಯಕ್ಷ ಡಿ.ಆರ್. ಚಂದ್ರರೆಡ್ಡಿ, ನಿರ್ದೇಶಕರಾದ ಪಿ. ತಿಮ್ಮಪ್ಪ, ಶಿವರಾಮಗೌಡ, ಬಿ.ಎಂ. ಜಡೆಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದಲ್ಲದೆ ವೈದ್ಯರಾದ ನವೀನ್ ಕುಮಾರ್, ನಾಗಪ್ರಿಯಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ, ರಾಷ್ಟ್ರೀಯ ಸಾಕ್ಷರತಾ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸದಸ್ಯ ಅಬ್ದುಲ್ ನಬಿ, ಡಿ ಫಾರ್ಮಸಿ ಕಾಲೇಜಿನ ಉಪನ್ಯಾಸಕಿ ಅರುಣಾ, ಆರೋಗ್ಯ ಆಪ್ತ ಸಮಾಲೋಚಕ ಮಲ್ಲೇಶಪ್ಪ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ನಾರೇಶ್, ಪ್ರಿಯಾಂಕ, ವಿಜಯಕುಮಾರ್, ಭವಾನಿ ಸೇರಿದಂತೆ ವೈದ್ಯರ ತಂಡ ಶಿಬಿರದಲ್ಲಿ ಭಾಗವಹಿಸಿದ್ದರು.