×
Ad

ಬಳ್ಳಾರಿ | ಕೈವಾರ ತಾತಯ್ಯ ಜಯಂತಿ ಆಚರಣೆ

Update: 2026-03-04 23:48 IST

ಬಳ್ಳಾರಿ : ಈಗಿನ ಯುವ ಪೀಳಿಗೆಯು ಗುಣಮಟ್ಟದ ಶಿಕ್ಷಣ ಪಡೆದು ತಮ್ಮನ್ನು ತಾವು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಮಾತ್ರ ಮುಂಚೂಣಿಗೆ ಬರಲು ಸಾಧ್ಯ ಎಂದು ಮಹಾನಗರ ಪಾಲಿಕೆಯ ಮಹಾಪೌರ ಪಿ. ಗಾದೆಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ವಡ್ಡರಬಂಡೆಯ ಬಲಿಜ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಯೋಗಿ ನಾರೇಯಣ ಯತೀಂದ್ರ ಶ್ರೀ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಮಾನವ ಸಂದೇಶ ಸಾರಿದ ನಾರೇಯಣ ಯತೀಂದ್ರ ಅವರ ಜಯಂತಿ ಆಚರಣೆ ಅರ್ಥಪೂರ್ಣವಾಗಿದೆ. ಮಹಾನ್ ನಾಯಕರ ಆದರ್ಶ ಗುಣಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯುವ ಜಯಂತಿ ಕಾರ್ಯಕ್ರಮಗಳಿಗೆ ಮಹಾನಗರ ಪಾಲಿಕೆ ವತಿಯಿಂದ ವಿಶೇಷ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಮಾತನಾಡಿ, ಬಲಿಜ ಜನಾಂಗವು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಾಗಿ ಪಡೆದು ಮತ್ತಷ್ಟು ಅಭಿವೃದ್ಧಿ ಹೊಂದಬೇಕು ಎಂದು ಆಶಿಸಿದರು.

ನಿವೃತ್ತ ಶಿಕ್ಷಕ ಕೆ.ಬಿ. ಸಿದ್ದಲಿಂಗಪ್ಪ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಕೈವಾರದ ಯೋಗಿ ನಾರೇಯಣ ಯತೀಂದ್ರ (ತಾತಯ್ಯ) ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಸಂತ, ಕವಿ ಹಾಗೂ ಕಾಲಜ್ಞಾನಿ. ಭಕ್ತಿ ಮಾರ್ಗ, ವೇದಾಂತ ಮತ್ತು ಸಾಮಾಜಿಕ ಸಮಾನತೆಯನ್ನು ಬೋಧಿಸಿದ ಅವರು ಕನ್ನಡ ಹಾಗೂ ತೆಲುಗು ಸಾಹಿತ್ಯದಲ್ಲಿ ಜನಪ್ರಿಯ ಕೀರ್ತನೆಗಳು ಮತ್ತು ತತ್ವಪದಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅನುಕೃಷ ರೌಡರು ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು.

ಅದ್ದೂರಿ ಮೆರವಣಿಗೆ

ಜಯಂತಿ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಬಲಿಜ ಭವನದಿಂದ ಆರಂಭವಾದ ಮೆರವಣಿಗೆ ರಾಘವೇಂದ್ರ ಚಿತ್ರಮಂದಿರ, ಇಂದಿರಾ ವೃತ್ತ, ಗಡಿಗಿ ಚೆನ್ನಪ್ಪ ವೃತ್ತ, ಮೀನಾಕ್ಷಿ ವೃತ್ತ ಮಾರ್ಗವಾಗಿ ಮರಳಿ ಬಲಿಜ ಭವನಕ್ಕೆ ತಲುಪಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಕೆ. ರಮೇಶ್ ಬುಜ್ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಸೇರಿದಂತೆ ಸಮಾಜದ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News