ರಾಜ್ಯದ ಎಲ್ಲಾ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ : ಸಚಿವ ಝಮೀರ್ ಅಹ್ಮದ್
70ನೇ ʼಕರ್ನಾಟಕ ರಾಜ್ಯೋತ್ಸವʼ ಕಾರ್ಯಕ್ರಮ
ವಿಜಯನಗರ (ಹೊಸಪೇಟೆ) : ಕನ್ನಡ ಭಾಷೆಗೆ ಶ್ರೀಮಂತ ಹಾಗೂ ಪ್ರಾಚೀನ ಇತಿಹಾಸವಿದೆ. ರಾಜ್ಯದ ಎಲ್ಲಾ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯವಾಗಿದ್ದು, ಉರ್ದು ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನಗರಸಭೆಯ ಸಹಯೋಗದಲ್ಲಿ ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ಭಾಷಾ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ನೇತೃತ್ವದಲ್ಲಿ ರಾಜ್ಯದ 4,300 ಉರ್ದು ಶಾಲೆಗಳು ಹಾಗೂ ಎಲ್ಲಾ ಮದರಸಾಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡ, ದ್ವಿತೀಯವಾಗಿ ಉರ್ದು ಹಾಗೂ ತೃತೀಯವಾಗಿ ಇಂಗ್ಲಿಷ್ ಆಯ್ಕೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
1973ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿರುವುದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಓಬಳಶೆಟ್ಟಿಹಳ್ಳಿ ಗ್ರಾಮದ ಗೊಲ್ಲರ ಸೂಲಗಿತ್ತಿ ಈರಮ್ಮ (13 ಸಾವಿರಕ್ಕೂ ಹೆಚ್ಚು ಹೆರಿಗೆ ನೆರವೇರಿಸಿದ ಕೊಡುಗೆ) ಮತ್ತು ಬಾಣದಕೇರಿ ನಿವಾಸಿ ಬಿ.ಮಾರೂತಿ (ಚಿತ್ರಕಲೆ) ಇವರನ್ನು ಸಚಿವರು ಅಭಿನಂದಿಸಿದರು.
ಚುನಾವಣಾ ಘೋಷಣೆ ಪ್ರಕಾರ ಘೋಷಿಸಿದ್ದ ಪಂಚ ಗ್ಯಾರಂಟಿಗಳನ್ನು ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲೇ ಜನರಿಗೆ ತಲುಪಿಸಲಾಗಿದೆ. ಆರನೇ ಗ್ಯಾರಂಟಿ ಎಂದು ಘೋಷಿಸದಿದ್ದರೂ, ವಸತಿಯಿಲ್ಲದವರಿಗೆ ಮನೆ ಕಲ್ಪಿಸುವ ಕಾರ್ಯಕ್ಕೆ ಸರ್ಕಾರ ಆದ್ಯತೆ ನೀಡಿದೆ ಎಂದು ಹೇಳಿದರು.
2016ರಲ್ಲಿ ಬೆಂಗಳೂರಿನಲ್ಲಿ 1,023 ಎಕರೆ ಜಾಗವನ್ನು ರಾಜೀವ್ ಗಾಂಧಿ ವಸತಿ ಯೋಜನೆಗೆ ಮೀಸಲಿಟ್ಟಿದ್ದು, ಬಡಜನರಿಗೆ ಸ್ವಂತ ಮನೆ ನಿರ್ಮಾಣಕ್ಕೆ ಸೌಲಭ್ಯ ಕಲ್ಪಿಸಲಾಗಿದೆ. ಕಳೆದ ವರ್ಷ 36,799 ಮನೆಗಳನ್ನು ಮಂಜೂರು ಮಾಡಿ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನವೆಂಬರ್ ತಿಂಗಳಲ್ಲಿ ಮತ್ತಷ್ಟು 42,345 ಮನೆಗಳನ್ನು ವಿತರಿಸಲಾಗುತ್ತಿದೆ. 2026 ಅಂತ್ಯದೊಳಗೆ ವಸತಿ ರಹಿತರಿಗೆ ಸೂರು ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಇತ್ತೀಚಿನ ಸಂಡೂರಿನಲ್ಲಿ 1,600 ಕೋಟಿ ರೂ. ಮತ್ತು ಕೊಪ್ಪಳದಲ್ಲಿ 950 ಕೋಟಿ ರೂ. ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಿರುವುದು ಅಭಿವೃದ್ಧಿಯ ಸ್ಪಷ್ಟ ನಿದರ್ಶನವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಬಡ ಹಾಗೂ ಮಧ್ಯಮ ವರ್ಗದವರ ಆರ್ಥಿಕ ಮಟ್ಟ ಸುಧಾರಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಎನ್ಸಿಸಿಸಿ, ಸ್ಕೌಟ್ಸ್ & ಗೈಡ್ಸ್ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳ ತಂಡಗಳು ಪಥಸಂಚಲನ ನಡೆಸಿದವು. ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿಯ ಕುರಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ವೇದಿಕೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ, ರಾಜ್ಯ ಉಪಧ್ಯಾಕ್ಷ ಎಸ್.ಆರ್.ಮೆಹರೂಝ್ ಖಾನ್, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎನ್.ಎಫ್.ಇಮಾಮ್ ನಿಯಾಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶಿವಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಸಹಾಯಕ ಆಯುಕ್ತ ಪಿ.ವಿವೇಕಾನಂದ, ತಹಶೀಲ್ದಾರ್ ಎಂ.ಶೃತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ :
ಕರ್ನಾಟಕ ರಾಜ್ಯೋತ್ಸವದ ನಿಮಿತ್ತವಾಗಿ ವಿಜಯನಗರ ಜಿಲ್ಲೆಯಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಟಿಪ್ಪುಸಾಬ್ (ಆರೋಗ್ಯ), ವಿ.ಮಲ್ಲೇಶಪ್ಪ (ಜಾನಪದ), ಎ.ಬಸರಾಜ (ಹವ್ಯಾಸಿ ರಂಗಭೂಮಿ), ಪಿ.ಸಿ.ಶಾಂತ (ವಿಕಲಚೇತನ), ಎಸ್.ಅಂಜು (ನೃತ್ಯ), ಆರ್.ಬಿ ನಿಂಗಪ್ಪ (ರಂಗಭೂಮಿ), ಕೊಟ್ರೇಶ್ ತಳವಾರ್ (ಚಿತ್ರಕಲೆ ಮತ್ತು ಶಿಲ್ಪಕಲೆ), ಹೆಚ್.ಜೆ.ಪದ್ಮಣ್ಣ (ಶಿಕ್ಷಣ), ಗುಂಡಿ ರಮೇಶ್ (ಸಮಾಜ ಸೇವೆ), ಎನ್.ಎಂ.ರವಿಕುಮಾರ್ (ಸಾಹಿತ್ಯ), ಮಧುಸುದನ್ ಹವಾಲ್ದಾರ್, ಜಿ.ಚಿನ್ನಪ್ಪ, ನೀಲಪ್ಪ, ವಿ.ಅನುರಾಧ (ಸಂಗೀತ), ವಿಜಯವಾಣಿ (ಕ್ರೀಡಾ) ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.