‘ಜಲಸಂಪನ್ಮೂಲ ಇಲಾಖೆಯ ನಾಲ್ಕು ನಿಗಮಗಳ ಮಹತ್ವದ ಸಭೆ’ : ನೂತನ ನೀರಾವರಿ ಯೋಜನೆಗಳಿಗೆ ಮುಖ್ಯಮಂತ್ರಿ ಹಸಿರು ನಿಶಾನೆ
ಬೆಂಗಳೂರು : ಜಲಸಂಪನ್ಮೂಲ ಇಲಾಖೆಯ ನಾಲ್ಕು ನಿಗಮಗಳ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ನೂತನ ಕಾಮಗಾರಿಗಳನ್ನು ಕೈಗೆತ್ತುಕೊಳ್ಳುವುದು ಮಾತ್ರವಲ್ಲದೆ, ಆದ್ಯತೆಯ ಮೇರೆಗೆ ಭೂಮಿಗೆ ನೀರುಣಿಸುವುದು ಹಾಗೂ ಬಾಯಾರಿದ ಗ್ರಾಮಗಳಿಗೆ ನೀರು ಹರಿಸುವ ಯೋಜನೆಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನುಮೋದನೆ ನೀಡಿದ್ದಾರೆ.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮ ಅಧ್ಯಕತೆಯಲ್ಲಿ ನಡೆದ ಕೃಷ್ಣಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಬಾಕಿ ಬಿಲ್ಲುಗಳನ್ನು ಬಿಡುಗಡೆಗೊಳಿಸುವುದು, ಶಾಸಕರಿಗೆ ಆದ್ಯತೆಯ ಮೇರೆಗೆ ಕಾಮಗಾರಿ ನೀಡುವುದು, ನೂತನ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
ನೀರಾವರಿ ಯೋಜನೆಗಳಿಗೆ ಮಾತ್ರವೇ ಇಲಾಖೆ ಹಣ ವ್ಯಯಿಸಬೇಕು. ರಸ್ತೆ, ಯುಜಿಡಿ ಸೇರಿದಂತೆ ಇತರೆ ಕಾಮಗಾರಿಗಳನ್ನು ನಗರಾಭಿವೃದ್ಧಿ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ವಹಿಸಬೇಕು. ಈ ಬಗ್ಗೆ ಸರಕಾರದ ಕಾರ್ಯದರ್ಶಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.
ಇಲಾಖೆ ವ್ಯಾಪ್ತಿಯಲ್ಲಿನ ಮೆಷಿನರಿಗಳಿಗೆ ಹಾಗೂ ಮೂಲಸೌಕರ್ಯಗಳಿಗೂ ವಿಮೆ ಮಾಡಿಸುವುದು, ನ್ಯಾಯಾಲಯ, ಅಗ್ನಿಶಾಮಕ ಠಾಣೆ ನಿರ್ಮಾಣ ಸೇರಿದಂತೆ ಸರಕಾರಿ ಯೋಜನೆಗಳಿಗೆ ಅಗತ್ಯವಿರುವ ಭೂಮಿಯನ್ನು ಉಚಿತವಾಗಿ ಜಲಸಂಪನ್ಮೂಲ ಇಲಾಖೆಯು ಹಸ್ತಾಂತರಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಕಾಲುವೆಗಳ ಮೂಲಕ ಅನಧಿಕೃತವಾಗಿ ನೀರು ಪಡೆಯುತ್ತಿರುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಕಳ್ಳತನ ನಡೆಯುವ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಕೂಡಲೇ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಿರಿ ಎಂದು ಮುಖ್ಯಮಂತ್ರಿ ಹಾಗೂ ಸಚಿವರು ಸೂಚನೆ ನೀಡಿದರು. ಜಲಸಂಪನ್ಮೂಲ ಇಲಾಖೆಗಳ ಆರ್ಥಿಕ ಬಲವರ್ಧನೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೂಲಕ ಅನುದಾನ (ರಾಯೆಲ್ಟಿ) ಪಡೆಯಬೇಕು. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಕೆಎಂಆರ್ಇಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ನೀಡಬೇಕು ಎಂದು ನಿಗಮಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಯಿತು.
ಬ್ಯಾರೇಜ್ ಸೇರಿದಂತೆ ಕೆಲ ಯೋಜನೆಗಳನ್ನು ಲೆಕ್ಕದಲ್ಲಿ ತೋರಿಸಿದರೆ ಸಾಲದು. ನಾಲೆ, ಸೇತುವೆ ಶಿಥಿಲಗೊಂಡಿರುವುದಕ್ಕೆ ಸೂಕ್ತ ದಾಖಲೆಯ ಫೋಟೊ ತೋರಿಸಬೇಕು. ಮುಂದಿನ ಎಲ್ಲ ಕಾಮಗಾರಿಗಳಿಗೂ ಸೂಕ್ತ ದಾಖಲೆ ನೀಡಬೇಕು ಎಂದು ಸೂಚನೆ ನೀಡಿದರು.