×
Ad

ಬೆಂಗಳೂರು| ದೇವಸ್ಥಾನದ ವಿಗ್ರಹ ವಿರೂಪಗೊಳಿಸಿದ ಪ್ರಕರಣ: ಬಾಂಗ್ಲಾ ಮೂಲದ ಆರೋಪಿಯ ಬಂಧನ

ಆರೋಪಿಯನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲು

Update: 2025-10-29 20:23 IST

Photo credit: NDTV

ಬೆಂಗಳೂರು: ಚಪ್ಪಲಿ ಧರಿಸಿ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶ ಮಾಡಿ ವಿಗ್ರಹ ವಿರೂಪಗೊಳಿಸಿದ ಆರೋಪದಲ್ಲಿ ಬಾಂಗ್ಲಾದೇಶ ಮೂಲದ ಆರೋಪಿಯನ್ನು ಮಾರತಹಳ್ಳಿ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕಬೀರ್ ಮಂಡಲ್(34) ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಬೀಸನಹಳ್ಳಿಯಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಅ.28ರಂದು ಘಟನೆ ನಡೆದಿದೆ.

ಬೆಳಗ್ಗೆ ದೇವರಬೀಸನಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿ ದೇವಾಲಯದ ಒಳಗೆ ಚಪ್ಪಲಿ ಧರಿಸಿಕೊಂಡು ಪ್ರವೇಶಿಸಿದ ಆರೋಪಿ ಕಬೀರ್ ಮಂಡಲ್, ದ್ವಾರಪಾಲಕ ವಿಗ್ರಹಗಳ ಭಗ್ನಗೊಳಿಸಿಲ್ಲದೆ, ತನ್ನ ಚಪ್ಪಲಿಗಳಿಂದ ವಿಗ್ರಹಗಳಿಗೆ ಹೊಡೆಯಲಾರಂಭಿಸಿದ್ದ ಆರೋಪಿಸಲಾಗಿದೆ. ಕೂಡಲೇ ಇದನ್ನು ಗಮನಿಸಿದ ದೇವಸ್ಥಾನದ ಉಸ್ತುವಾರಿಯೊಬ್ಬ ಆರೋಪಿಯನ್ನು ಹಿಡಿದು ಹೊರಗೆ ಕರೆತಂದಿದ್ದಾನೆ. ಬಳಿಕ ಆ ಗ್ರಾಮದ ಕೆಲವರು ಆರೋಪಿಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಕೆ.ಪರಶುರಾಮ ತಿಳಿಸಿದರು.

ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾರತಹಳ್ಳಿ ಠಾಣೆಯ ಪೊಲೀಸರು ಆರೋಪಿ ಕಬೀರ್ ಮಂಡಲ್‌ನನ್ನು ಬಂಧಿಸಿದ್ದು, ದೇವಸ್ಥಾನ ಆಡಳಿತ ಮಂಡಳಿಯವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ. ಅಲ್ಲದೆ, ಆರೋಪಿಗೆ ಥಳಿಸಿದವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಕೆ.ಪರಶುರಾಮ ಹೇಳಿದರು.

ಆರೋಪಿಯು ಪಶ್ಚಿಮ ಬಂಗಾಳ ಮಾರ್ಗದಲ್ಲಿ ಅಕ್ರಮವಾಗಿ ಭಾರತಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದ್ದು. ಹಿಂದಿನ ಎರಡು ವರ್ಷಗಳಿಂದ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬೆಂಗಳೂರಿನಲ್ಲೇ ನೆಲೆಸಿದ್ದಾನೆ ಎಂದು ತಿಳಿದುಬಂದಿದೆ. ಈತ ವೇಣುಗೋಪಾಲಸ್ವಾಮಿ ದೇವಸ್ಥಾನದೊಳಗೆ ʼಅಲ್ಲಾಹು ಅಕ್ಬರ್ʼ ಎಂದು ಘೋಷಣೆ ಕೂಗಿರುವ ಬಗ್ಗೆ ಯಾವುದೇ ಖಚಿತತೆ ಇಲ್ಲ ಎಂದು ಡಿಸಿಪಿ ಕೆ.ಪರಶುರಾಮ ಮಾಹಿತಿ ನೀಡಿದರು.

ಮುಂಜಾಗ್ರತಾ ಕ್ರಮವಾಗಿ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಕೆಎಸ್‌ಆರ್‌ಪಿ ತುಕಡಿ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ಡಿಸಿಪಿ ಕೆ.ಪರಶುರಾಮ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News