Bengaluru | ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯರಿಬ್ಬರ ಮೃತದೇಹ ಪತ್ತೆ

Update: 2026-08-06 20:57 IST

ಸಾಂದರ್ಭಿಕ ಚಿತ್ರ 

ಬೆಂಗಳೂರು: ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಜಕ್ಕೂರು ಮುಖ್ಯ ರಸ್ತೆಯಲ್ಲಿರುವ ರೆಸ್ಟೋರೆಂಟ್ ಸಮೀಪದ ನಿರ್ಜನ ಪ್ರದೇಶದಲ್ಲಿ ನೇಪಾಳ ಮೂಲದ ಇಬ್ಬರು ಯುವತಿಯರು ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತರನ್ನು ನೇಪಾಳ ಮೂಲದ ಸೃಜನಾ(22) ಮತ್ತು ರೀಟಾ(23) ಎಂದು ಗುರುತಿಸಲಾಗಿದೆ.

ಇಬ್ಬರು ಯುವತಿಯರು 15 ದಿನಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ಒಬ್ಬರು ಆಮೃತಹಳ್ಳಿಯಲ್ಲಿ ವಾಸವಾಗಿದ್ದರೆ, ಮತ್ತೊಬ್ಬರು ಪ್ರೇಜರ್ ಟೌನ್‍ನಲ್ಲಿ ನೆಲೆಸಿದ್ದರು. ಇವರಿಬ್ಬರು ಮನೆಗೆಲಸ ಮಾಡಿಕೊಂಡಿದ್ದರು. ಇದೀಗ ಮರಕ್ಕೆ ಕಟ್ಟಿದ್ದ ಒಂದೇ ಸೀರೆಯ ಎರಡು ಬದಿಯ ತುದಿಗಳಿಗೆ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿ ಯುವತಿಯರ ಮೃತದೇಹಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಇಬ್ಬರೂ ಯುವತಿಯರು ರಾತ್ರಿಯ ವೇಳೆಯೇ ಮೃತಪಟ್ಟಿರಬಹುದು. ಇದು ಆತ್ಮಹತ್ಯೆಯೋ ಅಥವಾ ಘಟನೆ ಹಿಂದೆ ಬೇರೇನಾದರೂ ದುಷ್ಕೃತ್ಯವಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹಾಗೆಯೇ ಈ ಇಬ್ಬರು ಯುವತಿಯರ ಚಲನವಲನಗಳು ಹಾಗೂ ಸಂಪರ್ಕಗಳು ಮತ್ತು ಅವರ ಸಾವಿಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಯಲಹಂಕ ಠಾಣೆ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News