ಲಾಲ್‍ಬಾಗ್ ಮಾದರಿ ಮೂರು ಉದ್ಯಾನ ನಿರ್ಮಾಣಕ್ಕೆ ಚಿಂತನೆ: ಸಿಎಂ ಡಿ.ಕೆ. ಶಿವಕುಮಾರ್

ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

Update: 2026-08-06 20:40 IST

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಲಾಲ್‍ಬಾಗ್ ಮಾದರಿಯ ಮೂರು ಉದ್ಯಾನ ವನಗಳನ್ನು ನಿರ್ಮಾಣ ಮಾಡಲು ನಮ್ಮ ಸರಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಗರದ ಲಾಲ್‍ಬಾಗ್‍ನಲ್ಲಿ ಆಯೋಜಿಸಿರುವ ‘ಗಂಗ ಸಾಮ್ರಾಜ್ಯ ವೈಭವ’ ಪರಿಕಲ್ಪನೆಯ 220ನೇ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿರುವ ರಕ್ಷಣಾ ಇಲಾಖೆ ಜಾಗದಲ್ಲಿ ಉದ್ಯಾನ ನಿರ್ಮಾಣ ಮಾಡುವ ಉದ್ದೇಶವಿದೆ. ಈ ಭೂಮಿ ರಕ್ಷಣಾ ಇಲಾಖೆ ವಶದಲ್ಲೇ ಇರುತ್ತದೆ. ಆದರೆ ಅಲ್ಲಿ ಉದ್ಯಾನ ನಿರ್ಮಿಸಲು ಅನುಮತಿ ಬೇಕು ಎಂದು ಪತ್ರ ಬರೆದಿದ್ದು, ಸಧ್ಯದಲ್ಲೇ ರಕ್ಷಣಾ ಸಚಿವರನ್ನು ಭೇಟಿ ಮಾಡುತ್ತೇನೆ. ವಾರಣಾಸಿಯಲ್ಲಿ ರಕ್ಷಣಾ ಇಲಾಖೆ ಜಾಗದಲ್ಲಿ ಉದ್ಯಾನ ನಿರ್ಮಿಸಲು ಪ್ರಧಾನಮಂತ್ರಿಗಳು ಅನುಮತಿ ನೀಡಿದ್ದಾರೆ. ಇದರ ಜೊತೆಗೆ ಬೆಂಗಳೂರು ನಗರದೊಳಗೆ ಇರುವ ಅರಣ್ಯ ಜಾಗದಲ್ಲಿ ಉದ್ಯಾನವನ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಜಿಬಿಎ, ಬಿಡಿಎ, ತೋಟಗಾರಿಕೆ ಇಲಾಖೆ ಸೇರಿದಂತೆ ಇತರ ಇಲಾಖೆಗಳಿಗೆ ಜವಾಬ್ದಾರಿ ವಹಿಸಿ ಉದ್ಯಾನ ನಿರ್ಮಿಸಲು ಆಲೋಚಿಸಿದ್ದೇವೆ. ನಮ್ಮ ಕಾಲದಲ್ಲಿ ನಗರದ ಹಸಿರು ಕಾಪಾಡಿ, ಸಾರ್ವಜನಿಕರ ಬದುಕಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಲಾಲ್‍ಬಾಗ್ ಕೇವಲ ಉದ್ಯಾನವನ ಮಾತ್ರವಲ್ಲ. ಇದೊಂದು ಇತಿಹಾಸ. ಗಂಗ ಸಾಮ್ರಾಜ್ಯದಲ್ಲಿ ಕೃಷಿಕರು, ರೈತರ ಇತಿಹಾಸವನ್ನು ಇಟ್ಟುಕೊಂಡು ಫಲಪುಷ್ಟ ಪ್ರದರ್ಶನವನ್ನು ರೂಪಿಸಲಾಗಿದೆ. ಗಂಗರು ಆಗಿನ ಕಾಲದಲ್ಲಿ ಕಟ್ಟಿದ್ದ ಕೆರೆಗಳು ಇಂದಿಗೂ ಉಳಿದಿವೆ. ಕಷ್ಟಕಾಲದಲ್ಲಿ ಆ ಕೆರೆಗಳು ರಕ್ಷಣೆ ಮಾಡಿವೆ. ಗಂಗರ ಇತಿಹಾಸ ಸಮಾನತೆ, ಕೃಷಿಕರ ಬದುಕು, ಹೋರಾಟವನ್ನು ಹೊಂದಿದೆ ಎಂದು ಹೇಳಿದರು.

ರಾಜ್ಯದಲ್ಲಿ ಹಸಿರು ಹೆಚ್ಚಿಸಿ ರೈತರ ಬದುಕು ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ. ಇದು ರೈತರು ಹಾಗೂ ಸರಕಾರದ ನಡುವಿನ ಪಾಲುದಾರಿಕೆಯ ಕಾರ್ಯಕ್ರಮವಾಗಿದೆ. ಇದನ್ನು ಆ. 15ರಂದು ಪ್ರಕಟಿಸುತ್ತೇವೆ. ಸರಕಾರದ 100 ದಿನಗಳ ಕಾರ್ಯಕ್ರಮ ರೂಪಿಸಲಾಗಿದ್ದು, ರೈತರ ಬದುಕಿಗೆ ಯಾವ ರೀತಿ ಶಕ್ತಿ ತುಂಬಬೇಕು ಎಂದು ಆಲೋಚಿಸಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ತೋಟಗಾರಿಕೆ ಇಲಾಖೆ (ಉದ್ಯಾನವನ, ಪುಷ್ಪಾಭಿವೃದ್ಧಿ) ಅಪರ ನಿರ್ದೇಶಕ ಡಾ.ಎಂ.ಜಗದೀಶ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News