Bengaluru | ಭೀಕರ ರಸ್ತೆ ಅಪಘಾತ: ತಾಯಿ-ಮಗ ಮೃತ್ಯು
ಸಾಂದರ್ಭಿಕ ಚಿತ್ರ
ಬೆಂಗಳೂರು : ಬೆಂಗಳೂರು-ಮೈಸೂರು ರಸ್ತೆಯ ಬ್ಯಾಟರಾಯನಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಹಾಗೂ ಮಗ ಮೃತಪಟ್ಟ ದಾರುಣ ಘಟನೆ ರವಿವಾರ ವರದಿಯಾಗಿದೆ.
ನ.30ರ ರವಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ತಾಯಿ-ಮಗ ಇಬ್ಬರೂ ಕೆ.ಆರ್.ಮಾರ್ಕೆಟ್ ಕಡೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರು ಮತ್ತು ಕಂಟೈನರ್ ನಡುವಿನ ಸಣ್ಣ ಜಾಗದಲ್ಲಿ ದ್ವಿಚಕ್ರ ವಾಹನ ಚಲಾಯಿಸಲು ಯತ್ನಿಸಿದಾಗ, ಕಂಟೈನರ್‌ಗೆ ದ್ವಿಚಕ್ರ ವಾಹನ ತಾಕಿ ಇಬ್ಬರೂ ರಸ್ತೆ ಮೇಲೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಇಬ್ಬರ ತಲೆಗೆ ತೀವ್ರ ಪೆಟ್ಟು ತಗುಲಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ತಾಯಿ ಅಶ್ವಿನಿ(41) ಮತ್ತು ಮಗ ಅಭಿಲಾಶ್(19) ಎಂದು ಗುರುತಿಸಲಾಗಿದೆ. ಈ ಸಂಬಂಧ ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರು ದೊಡ್ಡಗೊಲ್ಲರಹಟ್ಟಿಯವರಾಗಿದ್ದು, ಅಶ್ವಿನಿ ಅವರು ನಗರದ ಆಸ್ಪತ್ರೆಯೊಂದರಲ್ಲಿ ಭದ್ರತಾ ಸಿಬ್ಬಂದಿ ಆಗಿದ್ದರು ಎಂದು ತಿಳಿದುಬಂದಿದೆ. ಸದ್ಯ, ಮರಣೋತ್ತರ ಪರೀಕ್ಷೆಗಾರಿ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಇದ್ದರೂ ಧರಿಸದೆ ಚಾಲನೆ ಮಾಡಿರುವುದು ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.