ತೋಟಗಾರಿಕೆ ಇಲಾಖೆ ಜತೆ ಕೈಜೋಡಿಸಲು ಅನಿವಾಸಿ ಭಾರತೀಯ ಸಮಿತಿ ಸಿದ್ಧ: ಡಾ.ಆರತಿ ಕೃಷ್ಣ
Non-resident Indian Committee ready to join hands with Horticulture Department: Dr. Aarti Krishna
ಬೆಂಗಳೂರು: ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮ ಅಥವಾ ಸ್ಪರ್ಧೆಗಳನ್ನು ನಡೆಸಲು ಅನಿವಾಸಿ ಭಾರತೀಯ ಸಮಿತಿ ಸಿದ್ಧವಾಗಿದೆ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದ್ದಾರೆ.
ಶನಿವಾರ ನಗರದ ಲಾಲ್‍ಬಾಗ್‍ನಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ‘ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್‍ಆಟ್ರ್ಸ್, ಜಾನೂರು ಮತ್ತು ಪೂರಕ ಕಲೆಗಳ ಪ್ರದರ್ಶನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದೇಶಗಳಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿಯೂ ಹೂವು ಮತ್ತು ಕಲೆಗಳ ಬಗ್ಗೆ ಸ್ಪರ್ಧೆ ಅಥವಾ ವಿಶೇಷ ಕಾರ್ಯಕ್ರಮಗಳನ್ನು ಮಾಡಬಹುದು. ಈ ರೀತಿಯ ಯೋಜನೆಯನ್ನು ತೋಟಗಾರಿಕೆ ಇಲಾಖೆ ರೂಪಿಸಿ, ನನಗೆ ತಿಳಿಸಿದರೆ ಅನಿವಾಸಿ ಭಾರತೀಯ ಸಮಿತಿಯ ವತಿಯಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ನೆದರ್ ಲ್ಯಾಂಡ್, ಜರ್ಮನಿ ಸೇರಿ ವಿದೇಶಗಳಿಂದ ಹೂವಿನ ಸಸಿಗಳನ್ನು ತೆರಿಸಿಕೊಳ್ಳುವುದಿದ್ದರೆ, ನಮಗೆ ಮಾಹಿತಿ ನೀಡಿದರೆ ಅಲ್ಲಿನ ರಾಯಭಾರ ಕಚೇರಿಯ ಮೂಲಕ ಸಹಾಯ ಮಾಡಬಹುದು. ವಿದೇಶಗಳಲ್ಲಿ ಅನೇಕ ರೀತಿಯ ವಿಭಿನ್ನ ಪುಷ್ಪಗಳು ಸಿಗುತ್ತವೆ ಎಂದು ತಿಳಿಸಿದರು.
ಲಾಲ್‍ಬಾಗ್‍ಗೆ ಬಂದ ತಕ್ಷಣ 40 ವರ್ಷದ ಹಿಂದೆ ನನ್ನ ತಂದೆ ಬೇಗಾನೆ ರಾಮಯ್ಯ ಅವರು ಸಚಿವರಾಗಿದ್ದಾಗ ಅವರ ಜತೆ ಬಂದಿರುವ ನೆನಪಾಯಿತು. ತುಂಬಾ ವರ್ಷಗಳ ನಂತರ ಲಾಲ್‍ಬಾಗ್‍ಗೆ ಬಂದಿರುವುದು ಸಂತೋಷವಾಯಿತು ಎಂದು ಹೇಳಿದರು.
ಇಕೆಬಾನವನ್ನು ನಾನು ನೋಡಿದ್ದೆ, ಆದರೆ ಡಚ್‍ಆರ್ಟ್ ಬಗ್ಗೆ ತಿಳಿದಿರಲಿಲ್ಲ. ಲಾಲ್‍ಬಾಗ್‍ನಲ್ಲಿ ನಡೆಯುತ್ತಿರುವ ಇಕೆಬಾನ ಮತ್ತು ಪೂರಕ ಕಲೆಗಳ ಪ್ರದರ್ಶನದಿಂದ ಅದರ ಬಗ್ಗೆ ಗೊತ್ತಾಯಿತು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್, ಉಪನಿರ್ದೇಶಕ ಬಾಲಕೃಷ್ಣ ಎಚ್.ಟಿ ಮತ್ತಿತರರು ಉಪಸ್ಥಿತರಿದ್ದರು.