ವಕ್ಫ್ ತಿದ್ದುಪಡಿ ಕಾಯ್ದೆ ಮೂಲಕ ಕೇಂದ್ರ ಸರಕಾರ ಮುಸ್ಲಿಮರ ಹಕ್ಕುಗಳನ್ನು ಕಸಿಯಲು ಪ್ರಯತ್ನಿಸಿದೆ: ಮೌಲಾನಾ ಮಹ್ಫೂಝ್ ರಹ್ಮಾನಿ
ಬೆಂಗಳೂರು: ಕೇಂದ್ರ ಸರಕಾರವು ‘ವಕ್ಫ್ ತಿದ್ದುಪಡಿ ಕಾಯ್ದೆ-2025’ರ ಮೂಲಕ ಸಂವಿಧಾನವು ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರಿಗೆ ನೀಡಿರುವ ಹಕ್ಕುಗಳನ್ನು ಕಸಿಯಲು ಪ್ರಯತ್ನಿಸಿದೆ. ಈ ಕಾನೂನು ನಮ್ಮ ಶರೀಅತ್ ನಲ್ಲಿ ಹಸ್ತಕ್ಷೇಪ ಮಾಡುವುದಲ್ಲದೆ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಉಮರೈನ್ ಮಹ್ಫೂಝ್ ರಹ್ಮಾನಿ ತಿಳಿಸಿದರು.
ಗುರುವಾರ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ(ಎಇಎಂಪಿಬಿ) ವತಿಯಿಂದ ‘ವಕ್ಫ್ ರಕ್ಷಿಸಿ, ಸಂವಿಧಾನ ರಕ್ಷಿಸಿ’ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳೆಯ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಜರು ಸಮುದಾಯದ ಶ್ರೇಯೋಭಿವೃದ್ಧಿಗಾಗಿ ದಾನದ ರೂಪದಲ್ಲಿ ಕೊಟ್ಟಿರುವುದು ವಕ್ಫ್ ಆಸ್ತಿಗಳು. ಕೇಂದ್ರ ಸರಕಾರ ಈ ವಿವಾದಿತ ಕಾನೂನಿನ ಮೂಲಕ ಆ ಆಸ್ತಿಗಳನ್ನು ಕಬಳಿಸಲು ನಡೆಸುತ್ತಿರುವ ಪ್ರಯತ್ನಗಳನ್ನು ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಯಾವುದೆ ಕಾರಣಕ್ಕೂ ಸ್ವೀಕರಿಸವುದಿಲ್ಲ ಎಂದು ಅವರು ಹೇಳೀದರು.
ಕೇಂದ್ರ ಸರಕಾರ ಈ ಕಾನೂನನ್ನು ಹಿಂತೆಗೆದುಕೊಳ್ಳುವವರೆಗೆ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ಈ ಆಂದೋಲನದಲ್ಲಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸುತ್ತಿರುವುದು ಶ್ಲಾಘನೀಯ. ವಕ್ಫ್ ಅನ್ನೋದು ಆಡಳಿತಾತ್ಮಕ ವಿಷಯವಲ್ಲ, ಇದು ಧಾರ್ಮಿಕ ವಿಷಯ. ಇದರಲ್ಲಿ ಸರಕಾರದ ಹಸ್ತಕ್ಷೇಪ ಯಾಕೆ?, ಮಹಿಳೆಯರು ತಮ್ಮೊಳಗಿರುವ ನಂಬಿಕೆ, ಉತ್ಸಾಹ ಮತ್ತು ದೃಢಸಂಕಲ್ಪದ ಶಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಮಹ್ಫೂಝ್ ರಹ್ಮಾನಿ ಕರೆ ನೀಡಿದರು.
ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಅಬು ತಾಲಿಬ್ ರಹ್ಮಾನಿ ಮಾತನಾಡಿ, ಕೇಂದ್ರ ಸರಕಾರದ ಈ ವಿವಾದಾತ್ಮಕ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಿದೆ. ನ್ಯಾಯಾಲಯದ ಅಂಗಳದಿಂದ ನಮಗೆ ನ್ಯಾಯದ ನಿರೀಕ್ಷೆಯಿದೆ ಎಂದು ಹೇಳಿದರು.
ದೇಶದೆಲ್ಲೆಡೆ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ವಿವಿಧ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಈ ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ನಮ್ಮ ಕಾರ್ಯಕ್ರಮಗಳನ್ನು ನ್ಯಾಯಾಲಯಕ್ಕೆ ಮಾಡಿದ ಅಪಮಾನ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಆದರೆ, ನಾವು ಈ ನೆಲದ ಕಾನೂನಿಗೆ ಗೌರವ ಕೊಟ್ಟು ಸಂವಿಧಾನದ ಚೌಕಟ್ಟಿನಡಿಯಲ್ಲಿಯೆ ನಮ್ಮ ವಿಚಾರವನ್ನು ಜನರ ಮುಂದಿಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಎಇಎಂಪಿಬಿ ಮಹಿಳಾ ವಿಭಾಗದ ಸಂಚಾಲಕಿ ಸುಲ್ತಾನಾ ಯಾಸ್ಮಿನ್ ಮಾತನಾಡಿ, ಕೇಂದ್ರ ಸರಕಾರವು 2014 ರಿಂದ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ ಮತ್ತು ಈಗ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಮುಸ್ಲಿಮರಿಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಈ ವಕ್ಫ್ ತಿದ್ದುಪಡಿ ಕಾಯ್ದೆಯು ದಬ್ಬಾಳಿಕೆಯ ಮತ್ತು ಅನ್ಯಾಯದ ಕಾನೂನಾಗಿದ್ದು, ಅದರ ಮೂಲಕ ಮುಸ್ಲಿಮರ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಈ ಕಾನೂನು ದೇಶದ ಸಂವಿಧಾನಕ್ಕೂ ವಿರುದ್ಧವಾಗಿದೆ ಮತ್ತು ಸಂವಿಧಾನದಲ್ಲಿ ನಮಗೆ ನೀಡಿರುವ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.
ಎಇಎಂಪಿಬಿ ಕರ್ನಾಟಕದ ಮಹಿಳಾ ವಿಭಾಗದ ಸದಸ್ಯೆ ಸಲ್ಮಾ ಶರೀಫ್ ಸ್ವಾಗತಿಸಿದರು. ಸಮ್ಮೇಳನದಲ್ಲಿ ಜಮೀಯತ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಎಇಎಂಪಿಬಿ ಸದಸ್ಯ ಆಸಿಮ್ ಅಫ್ರೋಝ್ ಸೇಠ್, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಳಗಾಮಿ, ಮುಖಂಡರಾದ ಯೂಸುಫ್ ಕನ್ನಿ, ಸುಲೇಮಾನ್ ಖಾನ್, ಮುಹಮ್ಮದ್ ಫಯಾಝ್ ಶರೀಫ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.