ಬಸವಕಲ್ಯಾಣ | ತಾಲೂಕು ಆರೋಗ್ಯಾಧಿಕಾರಿ, ಪಿಎಚ್‌ಸಿ ಸಿಬ್ಬಂದಿಯ ಅಮಾನತಿಗೆ ದಲಿತ ಸಂಘರ್ಷ ಸಮಿತಿ ಆಗ್ರಹ
ಬಸವಕಲ್ಯಾಣ : ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಮೈಲಾರೆ ಹಾಗೂ ಹಾರಕೂಡ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ದ್ವಿತೀಯ ದರ್ಜೆ ಸಹಾಯಕ ಸಿದ್ದಣ್ಣಾ ಅವರನ್ನು ಅಮಾನತುಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಒತ್ತಾಯಿಸಿದೆ.
ಈ ಸಂಬಂಧ ಬುಧವಾರ ಬಸವಕಲ್ಯಾಣದ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಂಘಟನೆ, ಹಾರಕೂಡ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಗೊಂಡಿರುವ ಸಿದ್ದಣ್ಣಾ ಅವರು ಕಳೆದ ಸುಮಾರು 10 ವರ್ಷಗಳಿಂದ ಕರ್ತವ್ಯ ನಿರ್ವಹಿಸದೇ, ಅವರ ಬದಲು ಪುತ್ರ ಮಹೇಶ್ ಅವರು ಕೆಲಸ ಮಾಡುತ್ತಿರುವುದು ಕಾನೂನುಬಾಹಿರವಾಗಿದೆ ಎಂದು ಆರೋಪಿಸಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಮೈಲಾರೆ ಅವರು ಮಹೇಶ್ ಅವರಿಂದ ಲಂಚ ಪಡೆದು ತಂದೆಯ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದು ಸ್ಪಷ್ಟವಾದ ಅಕ್ರಮ ಹಾಗೂ ಭ್ರಷ್ಟಾಚಾರವಾಗಿದ್ದು, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಬೇಕು ಎಂದು ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ.
ಅದೇ ರೀತಿ ಕರ್ತವ್ಯ ಲೋಪ ಎಸಗಿರುವ ಹಾರಕೂಡ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ದ್ವಿತೀಯ ದರ್ಜೆ ಸಹಾಯಕ ಸಿದ್ದಣ್ಣಾ ಅವರನ್ನೂ ಸೇವೆಯಿಂದ ವಜಾಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿಗೆ ಸ್ಪಂದಿಸಿ ಒಂದು ತಿಂಗಳ ಒಳಗಾಗಿ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ಉಪವಾಸ ಧರಣಿ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಯ ತಾಲೂಕು ಅಧ್ಯಕ್ಷ ಮಹಾದೇವ್ ಎಂ. ಗಾಯಕವಾಡ್, ಶಹಿದ್ ಪಾಷಾ, ಕವಿರಾಜ್ ದೇವಕರ್, ಸಚಿನ್ ಬಸನಳ್ಳೆ, ಅತೀಶ್ ಗಾಯಕವಾಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.