×
Ad

ಔರಾದ್ | 2 ಎಕರೆ ಭೂಮಿ, ಮೂಲಸೌಕರ್ಯ ಭರವಸೆ: ಧರಣಿ ಕೈ ಬಿಟ್ಟ ಪ್ರತಿಭಟನಾಕಾರರು

Update: 2026-01-29 22:30 IST

ಔರಾದ್ : ಪಟ್ಟಣದ ಸರ್ಕಾರಿ ಭೂಮಿ ಸರ್ವೆ ನಂಬರ್ 205/* ರಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ 2 ಎಕರೆ ಭೂಮಿ ನಿವೇಶನ ಹಾಗೂ ಮೂಲಭೂತ ಸೌಲಭ್ಯ ಒದಗಿಸುವುದಾಗಿ ಔರಾದ್ ತಹಶೀಲ್ದಾರ್ ಹಿಂಬರಹ ನೀಡಿದ ಹಿನ್ನೆಲೆಯಲ್ಲಿ, 11 ದಿನಗಳಿಂದ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವನ್ನು ಗುರುವಾರ ಸಂಜೆ ಪ್ರತಿಭಟನಾಕಾರರು ಹಿಂಪಡೆದಿದ್ದಾರೆ.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಗುರುವಾರ ರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಲೆಮಾರಿ–ಅರೆ ಅಲೆಮಾರಿ ಕುಟುಂಬಗಳಿಗೆ ಮುಂದಿನ ಆರು ತಿಂಗಳೊಳಗೆ 2 ಎಕರೆ ಭೂಮಿ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿ ಹಿಂಬರಹ ಪತ್ರ ನೀಡಿದರು. ಇದರಿಂದಾಗಿ ಅಲೆಮಾರಿ ಸಮುದಾಯದವರು ಶಾಂತಿಯುತವಾಗಿ ತಮ್ಮ ಹೋರಾಟವನ್ನು ಹಿಂಪಡೆದರು.

ತಹಸೀಲ್ದಾರ್ ನೀಡಿದ ಹಿಂಬರಹದಲ್ಲಿ, ಬೀದರ್ ಸಹಾಯಕ ಆಯುಕ್ತರು, ಔರಾದ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಪೊಲೀಸ್ ಅಧಿಕಾರಿಗಳು ಸಮಾಲೋಚನೆ ನಡೆಸಿ, ಪರಿಶಿಷ್ಟ ಜಾತಿ–ಪಂಗಡಗಳ 85 ಕುಟುಂಬಗಳು ಹಾಗೂ ಹಿಂದುಳಿದ ವರ್ಗಗಳ 143 ಕುಟುಂಬಗಳಿಗೆ ಮುಂದಿನ 6 ತಿಂಗಳಲ್ಲಿ ಸರ್ಕಾರದ ಕಾರ್ಯವಿಧಾನ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಅಲೆಮಾರಿ ಸಮುದಾಯಕ್ಕೆ ಭೂಮಿ ಮಂಜೂರಾತಿ ಹಾಗೂ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ, ಜ.19ರಿಂದ ಅಲೆಮಾರಿ ಸಮುದಾಯ ಹಾಗೂ ಕೆಲ ದಲಿತ ಸಂಘಟನೆಗಳು ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಈ ಹೋರಾಟದ ಫಲವಾಗಿ ಅಲೆಮಾರಿ ಸಮುದಾಯಕ್ಕೆ ಅಲ್ಪ ಜಯ ದೊರೆತಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.

ಈ ಸಂದರ್ಭದಲ್ಲಿ ಬೀದರ್ ಸಹಾಯಕ ಆಯುಕ್ತ ಮುಹಮ್ಮದ್ ಶಕೀಲ್, ತಹಸೀಲ್ದಾರ್ ಮಹೇಶ್ ಪಾಟೀಲ್, ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಹುಲ್ ಖಂದಾರೆ, ಸುಭಾಷ್ ಲಾಧಾ, ಪ್ರವೀಣ್ ಕಾರಂಜೆ, ಸಂತೋಷ್ ಸಿಂಧೆ ಹಾಗೂ ಅಲೆಮಾರಿ ಕುಟುಂಬಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News