ಬೀದರ್ | ಪಂಚ ಜಗದ್ಗುರುಗಳು ಸುಳ್ಳು ಇತಿಹಾಸ ಸೃಷ್ಠಿಸಿ ಬಸವಣ್ಣನವರನ್ನು ನಿರ್ಲಕ್ಷಿಸಿದ್ದರು : ಡಾ.ಬಸವರಾಜ್ ಸಬರದ್
24ನೇ ವಚನ ವಿಜಯೋತ್ಸವ ಕಾರ್ಯಕ್ರಮ
ಬೀದರ್ : ಪಂಚ ಜಗದ್ಗುರುಗಳು ಇತಿಹಾಸವನ್ನು ತಿರುಚಿ, ಸುಳ್ಳು ಇತಿಹಾಸ ರಚಿಸುವ ಮೂಲಕ ಬಸವಣ್ಣನವರನ್ನು ನಿರ್ಲಕ್ಷಿಸಿದ್ದರು. ಇದೇ ಕಾರಣಕ್ಕೆ ಜಾಗತಿಕ ಲಿಂಗಾಯತ ಮಹಾಸಭೆ ಹುಟ್ಟಿಕೊಂಡಿತು ಎಂದು ಹಿರಿಯ ಸಾಹಿತಿ ಡಾ.ಬಸವರಾಜ್ ಸಬರದ್ ಹೇಳಿದರು.
ನಗರದ ಬಸವಗಿರಿಯಲ್ಲಿ ಶುಕ್ರವಾರ ನಡೆದ 24ನೇ ವಚನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಚ ಜಗದ್ಗುರುಗಳು ಬಸವಣ್ಣನವರ ಕುರಿತು ಸುಳ್ಳು ಇತಿಹಾಸ ಸೃಷ್ಟಿಸಿದ್ದಾರೆ. “ಬಸವಣ್ಣ ಯಾರು? ಅವರು ಏನು ಮಾಡಿದ್ದಾರೆ? ಬಸವಣ್ಣ ನಮ್ಮ ನಂತರ ಬಂದವರಾಗಿದ್ದಾರೆ ಎಂದು ಪಂಚ ಜಗದ್ಗುರುಗಳು ಸುಳ್ಳು ಇತಿಹಾಸ ರಚಿಸಿದರು. ಆದರೆ ವಾಸ್ತವವಾಗಿ ಪಂಚ ಜಗದ್ಗುರುಗಳು 16–17ನೇ ಶತಮಾನದಲ್ಲಿ ಇಲ್ಲಿ ಬಂದವರು. ಬಸವಣ್ಣನವರು ಅದಕ್ಕಿಂತ ಮುಂಚೆಯೇ 12ನೇ ಶತಮಾನದಲ್ಲೇ ಸಮಾಜ ಸುಧಾರಣೆಯ ಕ್ರಾಂತಿ ನಡೆಸಿದ್ದರು ಎಂದು ಹೇಳಿದರು.
ಇಂದೀಗ ಪಂಚ ಜಗದ್ಗುರುಗಳಿಗೆ ಜ್ಞಾನೋದಯವಾಗಿದ್ದು, “ಬಸವಣ್ಣ ನಮ್ಮವರು” ಎಂದು ಹೇಳಿಕೊಳ್ಳುತ್ತಿದ್ದಾರೆ. ಜನರು ಇತಿಹಾಸವನ್ನು ಮರೆತು ಸುಮ್ಮನಿರುವುದಿಲ್ಲ ಎಂಬ ಸತ್ಯ ಅವರಿಗೆ ಅರಿವಾಗಿದೆ ಎಂದು ಹೇಳಿದರು.
ಸಮಾನತೆ ಎನ್ನುವುದು ಶರಣ ತತ್ವದ ಜೀವಾಳವಾಗಿದ್ದು, ಸೌಹಾರ್ದತೆ ಲಿಂಗಾಯತ ಧರ್ಮದ ಪ್ರಮುಖ ಗುರಿಯಾಗಿದೆ. ಇಂದಿನ ಮೌಲ್ಯಗಳೆಂದು ಪರಿಗಣಿಸಲ್ಪಡುವ ಈ ತತ್ವಗಳನ್ನು ಶರಣರು 12ನೇ ಶತಮಾನದಲ್ಲೇ ಅನುಷ್ಠಾನಕ್ಕೆ ತಂದಿದ್ದರು. ಒಂದು ಕಾಲದಲ್ಲಿ ಬಸವಣ್ಣನವರನ್ನು ವಿರೋಧಿಸಿದವರೇ ಇವತ್ತು ಅವರ ಹೆಸರು ಜಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಧರ್ಮ ಮತ್ತು ಕ್ರಾಂತಿ ಬೇರೆಬೇರೆಯಾಗಿದ್ದರೂ, ಧರ್ಮವನ್ನೇ ಕ್ರಾಂತಿಯಾಗಿ ರೂಪಿಸಿದ ಏಕೈಕ ವ್ಯಕ್ತಿ ಬಸವಣ್ಣ. ಧರ್ಮ ಮತ್ತು ಕ್ರಾಂತಿಯನ್ನು ಒಂದಾಗಿಸಿದ್ದ ಕಾರಣಕ್ಕೆ ಶರಣರ ಮೇಲೆ ಹತ್ಯಾಕಾಂಡ ನಡೆಯಿತು. ಜಾಗತೀಕರಣದ ಎಲ್ಲಾ ಕ್ರಾಂತಿಗಳಿಗಿಂತ ಬಸವಣ್ಣನವರ ಕ್ರಾಂತಿ ಜಗತ್ತಿನಲ್ಲೇ ವಿಶಿಷ್ಟವಾಗಿದೆ ಎಂದು ಹೇಳಿದರು.
ಬಸವ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಗಂಗಾಬಿಕೆ ಅಕ್ಕಾ ಮಾತನಾಡಿ, ಶರಣರನ್ನು ಆನೆ ಕಾಲಿಗೆ ಕಟ್ಟಿ ಎಳೆದರು, ಗಡಿಪಾರು ಮಾಡಿದರು, ವಚನ ಸಾಹಿತ್ಯವನ್ನು ಸುಟ್ಟರು. ಆದರೆ ಇಂದು ಭಾರತದ ಸಂವಿಧಾನದ ಮೂಲಕ ಶರಣರ ವಚನಗಳ ಆಶಯಗಳು ಕಾನೂನಾತ್ಮಕವಾಗಿ ಜಾರಿಗೆ ಬಂದಿವೆ ಎಂದು ಹೇಳಿದರು.
ವಚನ ಸಾಹಿತ್ಯ ಆರಂಭವಾದ ನಂತರವೇ ಎಲ್ಲರಿಗೂ ಓದು-ಬರಹದ ಅವಕಾಶ ದೊರೆಯಿತು. ಅದಕ್ಕೂ ಮೊದಲು ಕೇವಲ ಶೇ.1ರಷ್ಟು ಜನರಿಗೆ ಮಾತ್ರ ಶಿಕ್ಷಣ ಲಭ್ಯವಿತ್ತು. ಜಾತಿಭೇದವಿಲ್ಲದೆ ಶರಣರು ಬರೆದ ವಚನ ಸಾಹಿತ್ಯವೇ ಸಮಾನ ಶಿಕ್ಷಣದ ದಾರಿಯನ್ನು ತೆರೆದಿತು ಎಂದು ಹೇಳಿದರು.
ಇನ್ನೂ ವಚನ ಸಾಹಿತ್ಯವನ್ನು ದರ್ಶನ ಸಾಹಿತ್ಯ ಎಂದು ಅಧಿಕೃತವಾಗಿ ಕರೆಯದಿದ್ದರೂ, ಎಲ್ಲಾ ದರ್ಶನಗಳಿಗೆ ಮೂಲವಾದ ದರ್ಶನವೆಂದರೆ ಬಸವ ದರ್ಶನ. ಅಂತಹ ಮಹತ್ವದ ಸಾಹಿತ್ಯವನ್ನು ಶರಣರು ನಮಗೆ ನೀಡಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅನುಭವ ಮಂಟಪದ ಅಧ್ಯಕ್ಷೆ ನಾಡೋಜ ಡಾ.ಬಸವಲಿಂಗ ಪಟ್ಟದೇವರು, ಹುಲಸೂರ್ ಮಠದ ಡಾ. ಶಿವಾನಂದ ಮಹಾಸ್ವಾಮಿ, ರಾಪೋಲು ಸತ್ಯನಾರಾಯಣ, ನೀಲಕಂಠೇಶ್ವರ ಪ್ರಸಾದ್, ಚಂದ್ರಕಾಂತ್ ಮಿರ್ಚೆ, ಪ್ರಕಾಶ್ ಟೊಣ್ಣೆ, ಜಗನ್ನಾಥ್ ಹೆಬ್ಬಾಳೆ, ಶ್ರೀಕಾಂತ್ ಸ್ವಾಮಿ, ಸುರೇಶ್ ಚನ್ನಶೆಟ್ಟಿ, ಬಾಬು ವಾಲಿ, ದೇವರಾಜ್ ಬಿ. ಲಿಗಾಡೆ, ವನಿತಾ ಬಳತೆ, ಡಾ. ದೇವಕಿ, ಡಾ. ಅಶೋಕ್ ನಾಗುರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.