ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಹೆಚ್ಚುವರಿಯಾಗಿ 250 ಕೋಟಿ ರೂ. ನೀಡಲಾಗಿದೆ : ಸಚಿವ ರಹೀಮ್ ಖಾನ್
ಬೀದರ್ : ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಹೆಚ್ಚುವರಿಯಾಗಿ 250 ಕೋಟಿ ರೂ. ಹಣ ನೀಡಲಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ʼಪ್ರಗತಿ ಪರಿಶೀಲನಾ ಸಭೆʼಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4ರ ಅಡಿಯಲ್ಲಿ ಅನೇಕ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಭಾಗಶಃ ಪೂರ್ಣಗೊಂಡಿವೆ. ಇನ್ನು ಕೆಲವು ಕಾಮಗಾರಿಯ ಕೆಲಸ ಪ್ರಗತಿಯಲ್ಲಿವೆ. 15ನೇ ಹಣಕಾಸು ಆಯೋಗದ ಅನುದಾನದ ಅಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಪೂರೈಕೆ ಮತ್ತು ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳು ಕೈಗೊಳ್ಳಲಾಗಿದೆ. ಹಾಗೆಯೇ ರಾಜ್ಯ ಹಣಕಾಸು ಆಯೋಗದಿಂದ SCSP ಮತ್ತು TSP ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸ್ವಚ್ಛ ಭಾರತ ಮಿಷನ್ ಅರ್ಬನ್ 2.0 ಯೋಜನೆಯಡಿ ನಗರ ಪ್ರದೇಶಗಳಲ್ಲಿ ಗೃಹ ಶೌಚಾಲಯ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಅಮೃತ 2.0 ಯೋಜನೆ ಅಡಿಯಲ್ಲಿ ಉದ್ಯಾನವನ ಹಾಗೂ ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗಿದೆ. ಹುಮನಾಬಾದ್ ನಲ್ಲಿ 3 ಪಾರ್ಕ್ ಗಳ ನಿರ್ಮಾಣ, ಬೀದರ್ ನ ಪಾಪನಾಶ ಕೆರೆಗೆ 5 ಕೋಟಿ ರೂ., ಗೊರನಳ್ಳಿ ಕರೆಗೆ 15 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಬೀದರ್ ನಗರದಲ್ಲಿ 3 ಹಾಗೂ ಚಿಟ್ಟಗುಪ್ಪಾ ಮತ್ತು ಹಳ್ಳಿಖೇಡ (ಬಿ) ಗ್ರಾಮಗಳಲ್ಲಿ ತಲಾ ಒಂದು ಇಂದಿರಾ ಕ್ಯಾಂಟೀನ್ ಸೇರಿ ಜಿಲ್ಲೆಯಲ್ಲಿ ಹೊಸದಾಗಿ 5 ಇಂದಿರಾ ಕ್ಯಾಂಟೀನ್ ಆರಂಭವಾಗಲಿವೆ. ಇ-ಖಾತಾಗೆ ಸಂಬಂಧಿಸಿದ ಕಾರ್ಯಗಳು ಕೂಡ ತ್ವರಿತವಾಗಿ ಪ್ರಗತಿ ಕಾಣಬೇಕು ಎಂದರು.
ಶಾಸಕ ಡಾ. ಸಿದ್ಧಲಿಂಗಪ್ಪ ಎನ್. ಪಾಟೀಲ್ ಅವರು ಮಾತನಾಡಿ, ಹುಮನಾಬಾದ್, ಚಿಟ್ಟಗುಪ್ಪಾ, ಹಳ್ಳಿಖೇಡ (ಬಿ) ಪುರಸಭೆಯಲ್ಲಿ ಖಾಲಿ ಇರುವ ಹುದ್ದೆಗಳು ಭರ್ತಿ ಮಾಡಿಕೊಳ್ಳಲು ಸಚಿವರಿಗೆ ಮನವಿ ಮಾಡಿದರು.
ಶಾಸಕ ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ಹೊಸದಾಗಿ ಆಗಿರುವ ಮಹಾನಗರ ಪಾಲಿಕೆಗೆ ಬೀದರ್ ದಕ್ಷಿಣದ 8 ಗ್ರಾಮಗಳು ಸೇರ್ಪಡೆಯಾಗಿದ್ದು, ಅವುಗಳ ಸರ್ವಾಂಗಿಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಸಚಿವ ರಹೀಮ್ ಖಾನ್ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಪೌರಾಡಳಿತ ಮತ್ತು ಹಜ್ ಸಚಿವರ ಆಪ್ತ ಕಾರ್ಯದರ್ಶಿ ಕೆ.ಮುರಳಿಧರ್, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ನಗರಸಭೆಯ ಆಯುಕ್ತ ಶಿವರಾಜ್ ರಾಥೋಡ್ ಹಾಗೂ ಎಲ್ಲಾ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.