ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರವನ್ನೂ ಪರಿಶಿಷ್ಟ ಜಾತಿಗೆ ಮೀಸಲಿಡದೆ ದಲಿತ ಸಮುದಾಯಕ್ಕೆ ತೀವ್ರ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿರುವ ಬೀದರ್ ದಕ್ಷಿಣ ಕ್ಷೇತ್ರದ ಎಸ್ಸಿ ಜಿಲ್ಲಾ ಪಂಚಾಯಿತಿ ಹೋರಾಟ ಸಮಿತಿ, ಈ ಅನ್ಯಾಯವನ್ನು ಖಂಡಿಸಿ ಅಕ್ಟೋಬರ್ 16ರಂದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮಿತಿಯ ಸಲಹೆಗಾರ ರಾಜಕುಮಾರ್ ಸಿಂಧೆ, ಬೀದರ್ ಜಿಲ್ಲೆಯಲ್ಲಿ ಒಟ್ಟು 34 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿದ್ದು, ಈ ಹಿಂದೆ 12ರಷ್ಟಿದ್ದ ಎಸ್ಸಿ ಮೀಸಲು ಕ್ಷೇತ್ರಗಳನ್ನು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಒಂಬತ್ತಕ್ಕೆ ಇಳಿಸಲಾಗಿದೆ ಎಂದು ಆರೋಪಿಸಿದರು.

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 80 ಸಾವಿರಕ್ಕೂ ಅಧಿಕ ದಲಿತ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಜನಸಂಖ್ಯೆ ಶೇ. 42.96ರಷ್ಟಿದೆ. ಇಷ್ಟೊಂದು ಜನಸಂಖ್ಯೆ ಇದ್ದರೂ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಒಂದನ್ನೂ ಎಸ್ಸಿ ಸಮುದಾಯಕ್ಕೆ ಮೀಸಲಿಟ್ಟಿಲ್ಲ. ಇದು ದಲಿತ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಕ್ಟೋಬರ್ 16ರಂದು ಹಮ್ಮಿಕೊಂಡಿರುವ ಹೋರಾಟದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ದಲಿತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ರಾಜಕುಮಾರ್ ಸಿಂಧೆ ಮನವಿ ಮಾಡಿದರು.

ಸಮಿತಿಯ ಉಪಾಧ್ಯಕ್ಷ ವೀರಶೆಟ್ಟಿ ಬಂಬುಳಗಿ ಮಾತನಾಡಿ, ಸ್ವಾಭಿಮಾನಿ ದಲಿತ ಹೋರಾಟಗಾರರು ಹಾಗೂ ಆಕಾಂಕ್ಷಿಗಳು ರಾಜಕೀಯವಾಗಿ ಬೆಳೆಯಬಾರದು ಮತ್ತು ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ಮನುವಾದಿ ನಾಯಕರು ದೊಡ್ಡ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.

ಗೌತಮ ಬಗದಲ್ಕರ್ ಮಾತನಾಡಿ, ದಲಿತರ ಮತಗಳನ್ನು ಪಡೆದು ಗೆದ್ದಿರುವ ಹಾಲಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಜಿ ಶಾಸಕ ಅಶೋಕ್ ಖೇಣಿ ಅವರು ಈ ಅನ್ಯಾಯದ ಕುರಿತು ಮೌನ ವಹಿಸಿದ್ದಾರೆ ಎಂದು ದೂರಿದರು. ಜಿಲ್ಲಾಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆ ಹಾಗೂ ಜನಪ್ರತಿನಿಧಿಗಳು ಸಲ್ಲಿಸುವ ವರದಿಗಳ ಆಧಾರದ ಮೇಲೆಯೇ ಮೀಸಲಾತಿ ಪ್ರಕಟವಾಗುವುದರಿಂದ ಈ ಅನ್ಯಾಯಕ್ಕೆ ಇವರೇ ನೇರ ಹೊಣೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾರತೀಯ ನ್ಯಾಷನಲ್ ಭೀಮ್ ಆರ್ಮಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದಿಲೀಪಕುಮಾರ್ ವರ್ಮಾ, ರಾಜಕುಮಾರ್ ಜ್ಯೋತಿ, ಸಮಿತಿಯ ಜಿಲ್ಲಾಧ್ಯಕ್ಷ ರಾಘವೇಂದ್ರ ಕಿರಣ್, ಸಮಿತಿಯ ಸಲಹೆಗಾರ ಪ್ರಕಾಶ್, ಶಿವಕುಮಾರ್ ಮುತ್ತಂಗಿಕರ್, ಶಿವಕಾಂತ್ ಹಾರೂರಗೇರಿಕರ್, ವೈಜಿನಾಥ್ ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor