ಭಾಲ್ಕಿಯಲ್ಲಿ ಬಾಲಯೇಸು ಪುಣ್ಯಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಚಾಲನೆ
ಭಾಲ್ಕಿ: ನಗರದ ಭಾಲ್ಕಿ-ನಿಲಂಗಾ ಮುಖ್ಯರಸ್ತೆಯಲ್ಲಿರುವ ಬಾಲಯೇಸು ಪುಣ್ಯಕ್ಷೇತ್ರ ಯೇಸು ನಿಲಯದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಬಾಲಯೇಸುವಿನ ಭವ್ಯ ಮೆರವಣಿಗೆ ಭಕ್ತಿಭಾವ ಹಾಗೂ ಸಂಭ್ರಮದಿಂದ ನಡೆಯಿತು. ಮೂರು ದಿನಗಳ ಕಾಲ ನಡೆಯಲಿರುವ ಜಾತ್ರೆಯ ಮೊದಲ ದಿನ ನಗರದ ಪ್ರಮುಖ ವೃತ್ತಗಳ ಮೂಲಕ ಬಾಲಯೇಸುವಿನ ಆಕರ್ಷಕ ಮೆರವಣಿಗೆ ಸಾಗಿತು. ಅಪಾರ ಸಂಖ್ಯೆಯ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿ ಮತ್ತು ಶ್ರದ್ಧೆ ಮೆರೆದರು. ಭಜನೆ, ಪ್ರಾರ್ಥನೆ ಹಾಗೂ ಧಾರ್ಮಿಕ ಭಕ್ತಿಗೀತೆಗಳೊಂದಿಗೆ ಸಾಗಿದ ಮೆರವಣಿಗೆ ಭಕ್ತರ ಗಮನ ಸೆಳೆಯಿತು. ಎಲ್ಲೆಡೆ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು.
ಇದಕ್ಕೂ ಮುನ್ನ ಗುಲಬರ್ಗಾ ಧರ್ಮಕ್ಷೇತ್ರದ ಫಾದರ್ ಸಂತೋಷ್ ಬಾಪು ಅವರ ನೇತೃತ್ವದಲ್ಲಿ ಸಂಭ್ರಮದ ಪವಿತ್ರ ಬಲಿಪೂಜೆ ನೆರವೇರಿತು. ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿ ಬಾಲಯೇಸುವಿನ ಆಶೀರ್ವಾದ ಪಡೆದರು.
ನ. 7ರಂದು ಬೆಂಗಳೂರಿನ ಸಹಾಯಕ ಧರ್ಮಾಧ್ಯಕ್ಷ ಆರೋಕ್ಯರಾಜ್ ಸತೀಶಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ಬಲಿಪೂಜೆ ನಡೆಯಲಿದೆ. ಗುಲಬರ್ಗಾ ಧರ್ಮಕ್ಷೇತ್ರದ ರಾಬರ್ಟ್ ಮೈಕಲ್ ಮಿರಾಂಧ ಹಾಗೂ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದೇವರು ಭಾಗವಹಿಸಲಿದ್ದಾರೆ.
ನ. 8ರಂದು ನಡೆಯಲಿರುವ ಸಮಾರೋಪ ಸಮಾರಂಭದ ವಿಶೇಷ ಕಾರ್ಯಕ್ರಮಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಲಿದ್ದಾರೆ. ಈ ವರ್ಷದ ಜಾತ್ರಾ ಮಹೋತ್ಸವವನ್ನು ‘ಕುಟುಂಬದ ವರ್ಷ’ದ ಆಶಯದೊಂದಿಗೆ ಆಚರಿಸಲಾಗುತ್ತಿದ್ದು, ಮೂರು ದಿನಗಳಲ್ಲಿ ಸುಮಾರು 15 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಅಂತರ್ಧರ್ಮೀಯ ಸಂವಾದ, ಪಾಪ ನಿವೇದನೆ, ಆಪ್ತ ಸಮಾಲೋಚನೆ, ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಾತ್ರಾ ಉತ್ಸವ ಸಮಿತಿ ಸಂಯೋಜಕ ಫಾದರ್ ಡೇವಿಡ್ ಆಂಟೋನಿ ತಿಳಿಸಿದ್ದಾರೆ.