Bidar | ಡಿಜಿಟಲ್ ಯುಗದಲ್ಲಿ ಕನ್ನಡದ ಬಳಕೆ ವ್ಯಾಪಕವಾಗುತ್ತಿದೆ : ಸಾಧನಾ ರಂಜೋಳಕರ್
‘ಏಕೀಕರಣ ಚಳವಳಿ ಮತ್ತು ಕನ್ನಡದ ಅಸ್ಮಿತೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ
ಬೀದರ್: ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆ ವ್ಯಾಪಕವಾಗಿ ಹೆಚ್ಚುತ್ತಿದೆ. ಜಾಗತಿಕ ಹಾಗೂ ಡಿಜಿಟಲ್ ಯುಗದಲ್ಲಿ ಕನ್ನಡ ಭಾಷೆ ಬೆಳವಣಿಗೆ ಕಾಣುತ್ತಿರುವುದು ಸಂತಸ ತಂದಿದೆ ಎಂದು ಸಾಹಿತಿ ಸಾಧನಾ ರಂಜೋಳಕರ್ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೀದರ್ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ‘ಏಕೀಕರಣ ಚಳವಳಿ ಮತ್ತು ಕನ್ನಡದ ಅಸ್ಮಿತೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸ್ಆ್ಯಪ್ನಲ್ಲಿಯೂ ಕನ್ನಡದ ಬಳಕೆ ಹೆಚ್ಚುತ್ತಿದೆ. ಗೂಗಲ್, ಮೆಟಾ ಮತ್ತು ಮೈಕ್ರೋಸಾಫ್ಟ್ನಂತಹ ಜಾಗತಿಕ ಸಂಸ್ಥೆಗಳು ಕನ್ನಡ ಭಾಷೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿವೆ. ಉದ್ಯೋಗ ಕ್ಷೇತ್ರದಲ್ಲಿಯೂ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಹಿರಿಯ ಸಾಹಿತಿ ರಮೇಶ್ ಬಿರಾದಾರ್ ಮಾತನಾಡಿ, ಆಲೂರು ವೆಂಕಟರಾಯರನ್ನು ‘ಕರ್ನಾಟಕ ಕುಲಪುರೋಹಿತ’ ಎಂದು ಕರೆಯಲಾಗುತ್ತದೆ. ಅವರು 1917ರಲ್ಲಿ ಬರೆದ ‘ಕರ್ನಾಟಕ ಗತವೈಭವ’ ಗ್ರಂಥವು ವಿಭಜನೆಯಾಗಿದ್ದ ಕನ್ನಡಿಗರಿಗೆ ವಿಜಯನಗರ ಮತ್ತು ಚಾಲುಕ್ಯರಂತಹ ಹಳೆಯ ಸಾಮ್ರಾಜ್ಯಗಳ ವೈಭವವನ್ನು ನೆನಪಿಸಿ, ಒಗ್ಗೂಡುವಂತೆ ಪ್ರೇರೇಪಿಸಿತು. ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ ಏಕೀಕರಣ ಚಳವಳಿಯ ಅಧಿಕೃತ ಗೀತೆಯಾಗಿ ಲಕ್ಷಾಂತರ ಹೋರಾಟಗಾರರಲ್ಲಿ ಸ್ಫೂರ್ತಿ ತುಂಬಿತು ಎಂದು ನುಡಿದರು.
ಬಿವಿಬಿ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ಶಿವಲೀಲಾ ವಿರಯ್ಯ ಮಾತನಾಡಿ, ಡಾ. ಸಿದ್ದಲಿಂಗಯ್ಯ ಕನ್ನಡದ ಪ್ರಮುಖ ದಲಿತ ಕವಿ ಹಾಗೂ ಹೋರಾಟಗಾರರಾಗಿದ್ದರು. ಅವರ ‘ಹೊಲೆ ಮಾದಿಗರ ಹಾಡು’ ಮತ್ತು ‘ಸಾವಿರಾರು ನದಿಗಳು’ ಕವನ ಸಂಕಲನಗಳ ಹಾಡುಗಳು ಇಂದಿಗೂ ಸಾಮಾಜಿಕ ಹೋರಾಟಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ವಿಜಯಕುಮಾರ್ ತೋರಣೆಕರ್ ಹಾಗೂ ಜಗದೇವಿ ಸಿ. ದುಬಲಗುಂಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ. ಮಕ್ತುಂಬಿ ಎಂ. ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.