ಔರಾದ್: ಸ್ವಸಹಾಯ ಸಂಘದ ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸದೃಢರಾಗಲು ಸಾರ್ವಜನಿಕರು ಅವರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸಹಯೋಗದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಮಣ್ಣಿನ ಹಣತೆಗಳು ಹಾಗೂ ವಿವಿಧ ಕರಕುಶಲ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಸಹಾಯ ಸಂಘದ ಮಹಿಳೆಯರು ತಮ್ಮ ಸ್ವಂತ ಪರಿಶ್ರಮದಿಂದ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಿ ಸ್ವಾವಲಂಬನೆಯತ್ತ ಹೆಜ್ಜೆ ಇಡುತ್ತಿರುವುದು ಸಂತಸದ ಸಂಗತಿಯಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಯಾರಿಸಿರುವ ಮಣ್ಣಿನ ಹಣತೆಗಳು, ಚೆಂಡು ಹೂವುಗಳು, ಪೇಪರ್ ಪ್ಲೇಟ್‌ಗಳು, ಚಿಕ್ಕಿ, ಬಾಗಿಲು ಪರದೆ, ಪಾಪಡ ಹಾಗೂ ವಿವಿಧ ಗೃಹ ಅಲಂಕಾರಿಕ ವಸ್ತುಗಳು ಮಾರಾಟಕ್ಕೆ ಲಭ್ಯವಿವೆ. ಸಾರ್ವಜನಿಕರು ಮಾರುಕಟ್ಟೆಯಲ್ಲಿ ದೊರೆಯುವ ವಸ್ತುಗಳ ಜೊತೆಗೆ ಸ್ಥಳೀಯ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನೂ ಖರೀದಿಸಬೇಕು. ಇದರಿಂದ ಮಹಿಳೆಯರ ಆದಾಯ ಹೆಚ್ಚುವುದರ ಜೊತೆಗೆ ಅವರ ಉದ್ಯಮಶೀಲತೆಗೂ ಉತ್ತೇಜನ ದೊರೆಯಲಿದೆ ಎಂದರು.

ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ ಮಾತನಾಡಿ, ಎನ್‌ಆರ್‌ಎಲ್‌ಎಂ ಯೋಜನೆಯು ಗ್ರಾಮೀಣ ಮಹಿಳೆಯರಿಗೆ ಸ್ವಉದ್ಯೋಗ ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸಲು ಉತ್ತಮ ವೇದಿಕೆಯಾಗಿದೆ. ಮಹಿಳೆಯರು ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಸೌಲಭ್ಯ ಪಡೆದುಕೊಳ್ಳಬೇಕು. ಸಾರ್ವಜನಿಕರು ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ಮೂಲಕ ಮಹಿಳೆಯರ ಪರಿಶ್ರಮಕ್ಕೆ ಬೆಂಬಲ ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಪಂ ವ್ಯವಸ್ಥಾಪಕ ಸಂಜುಕುಮಾರ್ ಗೊರನಾಳೆ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ರಾಜಕುಮಾರ್ ಗೋರ್ಟೆ, ಶರಣಬಸಪ್ಪ ಸಾವಳೆ, ಕಾರ್ಯದರ್ಶಿ ಶರಣಪ್ಪ ನಾಗಲಗಿದ್ದೆ, ಶಿವಾನಂದ್ ಮಡ್ಡೆ, ಅಮರ್ ಬಿರಾದಾರ್, ಜಾಧವ್ ಸುಲೋಚನ, ಭೀಮಾಂಜಲಿ, ಅಕ್ಷತಾ ಹಾಗೂ ರಾಜ್ಯಶ್ರೀ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು ಮತ್ತು ಇತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor