Bidar | ಬರ ಪರಿಹಾರ, ಕಬ್ಬಿಗೆ ಬೆಂಬಲ ಬೆಲೆ ಸಹಿತ ರೈತರ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಮನವಿ
ಬೀದರ್: ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆಗಳು ಮಳೆಯಿಲ್ಲದೆ ಸಂಪೂರ್ಣ ನಷ್ಟವಾಗಿವೆ. ಅಂತರ್ಜಲ ಮಟ್ಟ ಕುಸಿದು ಬಾವಿ, ಕೊಳವೆಬಾವಿ ಹಾಗೂ ನದಿಗಳೂ ಬತ್ತಿಹೋಗಿವೆ. ಇದರಿಂದ ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆ ಉಂಟಾಗಿದೆ. ಸರ್ಕಾರ ಬರಗಾಲ ಘೋಷಿಸಿ ಎರಡು ತಿಂಗಳು ಕಳೆದರೂ ರೈತರಿಗೆ ಈವರೆಗೆ ಒಂದು ನಯಾಪೈಸೆಯೂ ಪರಿಹಾರ ದೊರೆತಿಲ್ಲ. ಜಿಲ್ಲೆಯ ರೈತರು ಬರಗಾಲದಿಂದ ತತ್ತರಿಸಿದ್ದು, ಅವರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು, ಬೀದರ್ ಜಿಲ್ಲೆಯಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಮಳೆಯ ಕೊರತೆಯಿಂದ ಕಬ್ಬಿನ ಬೆಳೆಗಳೂ ಒಣಗುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು. ಇದರ ಜೊತೆಗೆ ಪ್ರತಿ ಟನ್ ಕಬ್ಬಿಗೆ ರಾಜ್ಯ ಸರ್ಕಾರದಿಂದ 1,000 ರೂ. ಪ್ರೋತ್ಸಾಹಧನ ನೀಡಬೇಕು. ಶೀಘ್ರದಲ್ಲಿ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ. ಬರ ಪರಿಹಾರ ಒದಗಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಕೂಡಲೇ ವಿಮೆ ಪರಿಹಾರ ಕೊಡಿಸಬೇಕು. 2025-26ನೇ ಸಾಲಿನಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಹಣವನ್ನು ತಕ್ಷಣ ರೈತರ ಖಾತೆಗಳಿಗೆ ಜಮೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಬ್ಬಿನ ತೂಕದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರದಿಂದಲೇ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಅಳವಡಿಸಬೇಕು. ಈ ವರ್ಷ ಬರಗಾಲ ಇರುವುದರಿಂದ ಪ್ರತಿ ಜಾನುವಾರಿಗೆ ಮೇವಿಗಾಗಿ 10 ಸಾವಿರ ರೂ. ನೀಡಬೇಕು. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಶೀಘ್ರದಲ್ಲಿ ಗುತ್ತಿಗೆ ಆಧಾರದಲ್ಲಿ ವಹಿಸಿ, ಪುನರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಮೇಲಿನ ಎಲ್ಲ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇಡೀ ಬೀದರ್ ಜಿಲ್ಲೆ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು. ಇದರಿಂದ ಉಂಟಾಗುವ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಜಿಲ್ಲಾಧ್ಯಕ್ಷ ಶ್ರೀಮಂತ್ ಬಿರಾದಾರ್, ರಾಜ್ಯ ಮಹಿಳಾ ಕಾರ್ಯದರ್ಶಿ ಶೋಭಾವತಿ ಕಾರಭಾರಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.