×
Ad

ಬಸವಕಲ್ಯಾಣ ಶಾಸಕರಿಂದ ಹಲ್ಲೆಗೆ ಯತ್ನ; ಜಿ.ಪಂ ಮಾಜಿ ಸದಸ್ಯ ಆನಂದ್ ಪಾಟೀಲ್ ಆರೋಪ

Update: 2025-01-23 07:52 IST

ಬೀದರ್ : ಬಸವಕಲ್ಯಾಣ ಶಾಸಕ ಶರಣು ಸಲಗರ್ ಹಾಗೂ ಅವರ ಆಪ್ತರಿಂದ ನನ್ನ ಮೇಲೆ ಹಲ್ಲೆಗೆ ಯತ್ನ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಆನಂದ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ಸಾಯಂಕಾಲ ಬಸವಕಲ್ಯಾಣ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಹಿನೂರ್ ಗ್ರಾಮದ ಹತ್ತಿರ ಬ್ರಿಡ್ಜ್ ಕೆಲಸ ನಡೆಯುತ್ತಿತ್ತು. ಮಂಗಳವಾರ ಸಾಯಂಕಾಲ ಸುಮಾರು 5 ಗಂಟೆಗೆ ನಮ್ಮ ಊರಿನ ಜನ ಸೇರಿ ಆ ಕೆಲಸ ವೀಕ್ಷಣೆ ಮಾಡಲು ಹಾಗೂ ಗುತ್ತಿಗೆದಾರ ಅಥವಾ ನಿರ್ಮಿತಿ ಕೇಂದ್ರದವರು ಬಂದು ಆ ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ನಾವು ಅಲ್ಲಿಗೆ ಹೋಗಿದ್ದೆವು. ಸುಮಾರು 7:50 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಶರಣು ಸಲಗರ್ ಅವರು ನಮ್ಮ ಮೇಲೆ ನೇರವಾಗಿ ಹಲ್ಲೆ ಮಾಡಿದ್ದಾರೆ. ಎಂದು ಆರೋಪಿಸಿದರು.

ಅವಾಚ್ಯ ಶಬ್ದಗಳಿಂದ ನಿಂದಿಸಿದ ಅವರು, ನೀನು ಯಾವಾಗಲೂ ನನನ್ನು ವಿರೋಧ ಮಾಡುತ್ತಿದ್ದೀಯಾ, ನಿನ್ನನ್ನು ನೋಡ್ಕೋತೀನಿ ಎಂದು ಬೆದರಿಕೆ ಹಾಕಿದ್ದಾರೆ. ಅವರ ಸಂಗಡಿಗರು ಕೂಡ ನಮ್ಮ ಕೊರಳ ಪಟ್ಟಿ ಹಿಡಿದು ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಅದೃಷ್ಟವಶಾತ್ ನಮ್ಮ ಊರಿನ ಜನ ಹಲ್ಲೆಯನ್ನು ತಡೆದರು. ಇಲ್ಲದಿದ್ದರೆ ದೊಡ್ಡ ಪ್ರಮಾಣದಲ್ಲಿ ಹಲ್ಲೆಯಾಗುತ್ತಿತ್ತು ಎಂದು ಗಂಭೀರವಾಗಿ ದೂರಿದರು.

ಕೆಲಸದ ಸ್ಥಳದಲ್ಲಿ ಯಾವುದೇ ಸರಕಾರಿ ಇಲಾಖೆಯ ಅಧಿಕಾರಿಗಳು ಇರಲಿಲ್ಲ. ಆ ಕೆಲಸದ ಭೂಮಿ ಪೂಜೆಯ ಸಮಯದಲ್ಲಿಯೂ ಸರಕಾರಿ ಇಲಾಖೆಯ ಅಧಿಕಾರಿಗಳು ಯಾರೂ ಇರಲಿಲ್ಲ. ಕೆಲಸದ ಸ್ಥಳದಲ್ಲಿ ಶರಣು ಸಲಗರ್ ಅವರ ಕಾರ್ಯಕರ್ತರೇ ಇದ್ದರು. ಕಾರ್ಯಕರ್ತರ ಜತೆಗೂಡಿಯೇ ಅವರು ಭೂಮಿಪೂಜೆ ಮಾಡಿದ್ದಾರೆ. ಇದರಿಂದಾಗಿ ಸ್ವತಃ ಎಂ ಎಲ್ ಎ ಅವರೇ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅನ್ನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಈ ಕೆಲಸ 1 ಕೋಟಿ 10 ಲಕ್ಷ ರೂ. ವೆಚ್ಚದ್ದಾಗಿದೆ. 1 ಕೋಟಿ ರೂ. ಗಿಂತ ಹೆಚ್ಚಿನ ಕೆಲಸ ಇದ್ದರೆ ಜೆ ಇ ಇ, ಗುತ್ತಿಗೆದಾರ ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಥಳದಲ್ಲಿ ಇರಬೇಕು ಎಂದು ನಿಯಮವಿದೆ. ಇವರೆಲ್ಲ ಇದ್ದಾಗ ಮಾತ್ರ ಕೆಲಸ ಪ್ರಾರಂಭ ಮಾಡಬೇಕು. ಶರಣು ಸಲಗರ್ ಅವರ ಕಾರ್ಯಕರ್ತರು ಅಲ್ಲಿ ಕೆಲಸ ಮಾಡಿದರೆ ಖಂಡಿತವಾಗಿಯೂ ಅದರಲ್ಲಿ ಅವ್ಯವಹಾರ ನಡೆಯುತ್ತದೆ ಎಂದು ತಿಳಿಸಿದರು.

ತಾಲ್ಲೂಕಿನ ಎಲ್ಲೇ ಕೆಲಸ ನಡೆಯುತ್ತಿದ್ದರೂ ಸಹ ಶರಣು ಸಲಗರ್ ಅವರೇ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ನಮಗಿದೆ. 70 ರಿಂದ 80 ಕೋಟಿ ರೂ. ಯ ಕೆಲಸ ಪರೋಕ್ಷವಾಗಿ ಅವರೇ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ನಿರ್ಮಿತಿ ಕೇಂದ್ರ ನೆಪಕ್ಕೆ ಮಾತ್ರ ಆಗಿದೆ. ಸಣ್ಣ ಸಣ್ಣ ಗುತ್ತಿಗೆದಾರರಿಗೆ ಕೆಲಸ ಇಲ್ಲದಂತಹ ಪರಿಸ್ಥಿತಿ ಬಂದೊದಗಿದೆ. ನಿರ್ಮಿತಿ ಕೇಂದ್ರದ ಅಧ್ಯಕ್ಷ ಜಿಲ್ಲಾಧಿಕಾರಿಯಾಗಿರುತ್ತಾರೆ. ಅವರೇನು ಮಾಡುತ್ತಿದ್ದಾರೆ. ಎ ಇ ಇ ಮತ್ತು ಜೆ ಇ ಇ ಅವರು ಏನು ಮಾಡುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಸರಕಾರ ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ನಮ್ಮ ಮೇಲೆ ಹಲ್ಲೆ ಮಾಡಿದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ನಿರ್ಮಿತಿ ಕೇಂದ್ರದವರು ತಾವು ಖುದ್ದಾಗಿ ಬಂದು ಕೆಲಸ ಮಾಡಿದರೆ ಮಾತ್ರ ಈ ಕೆಲಸ ಮಾಡಲು ಬಿಡುತ್ತೇವೆ. ಸಚಿವರು, ಸಂಸದರ ಜೊತೆ ಚರ್ಚೆ ಮಾಡಿ ಯಾವುದೇ ಕಾರಣಕ್ಕೂ ಈ ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

ನಮ್ಮ ಮೇಲೆ ಹಲ್ಲೆ ಮಾಡಿದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅವರು ಇಬ್ಬರನ್ನು ಕರೆಸಿ ಮಾತನಾಡಿ ಪ್ರಕರಣ ದಾಖಲು ಮಾಡುತ್ತೇವೆ ಎಂದು ಹೇಳಿದ್ದಾರೆ. ವಿಳಂಬವಾದರೂ ಸರಿ ಪ್ರಕರಣ ದಾಖಲು ಮಾಡುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News