ಹುಮನಾಬಾದ್: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಂತೆ ಆಗ್ರಹಿಸಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು, ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆಯ ಕಾರ್ಮಿಕರು ಬುಧವಾರ ಬೆಂಗಳೂರಿನಲ್ಲಿ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ರಾಜಶೇಖರ್ ಪಾಟೀಲ್, ಕಾರ್ಖಾನೆ ಮುಚ್ಚಿರುವುದರಿಂದ ಜಿಲ್ಲೆಯ ಕಬ್ಬು ಬೆಳೆಗಾರರು, ರೈತರು ಹಾಗೂ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಚಟುವಟಿಕೆ ಮತ್ತು ಸಾವಿರಾರು ಕುಟುಂಬಗಳ ಜೀವನೋಪಾಯದ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಕಾರ್ಖಾನೆ ಪುನರಾರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೀದರ್ ಜಿಲ್ಲೆಯ ರೈತರು ಮತ್ತು ಕಾರ್ಮಿಕರಿಗೆ ನ್ಯಾಯ ದೊರಕುವಂತೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಅಗತ್ಯ ನಿರ್ಧಾರ ಕೈಗೊಳ್ಳುವಂತೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮನವಿ ಸ್ವೀಕರಿಸಿದ ಸಹಕಾರ ಸಚಿವ ಲಕ್ಷ್ಮಣ ಸವದಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಈ ವಿಷಯವನ್ನು ಚರ್ಚಿಸಿ, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ್ ಅರಳಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಮಂತ್ ಬಿರಾದಾರ್, ರೈತ ಸಂಘದ ಗೌರವಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಸ್ವಾಮಿ, ಬಿಎಸ್ಎಸ್ಕೆ ಕಾರ್ಮಿಕರಾದ ರಾಜಶೇಖರ್ ಹಂದ್ರಾಳೆ, ಅರ್ಜುನ್ ತಮಗಿಕರ್, ಗುರುಲಿಂಗಯ್ಯ ಹಾಲಾ, ಝರ್ನಾರೆಡ್ಡಿ, ರಾಜು ಪಾಟೀಲ್, ಮಲ್ಲಿಕಾರ್ಜುನ್ ಭಂಡಾರಿ, ಶಿವಕುಮಾರ್ ಚಳಕಾಪೂರೆ, ಝರನು ಕಾವಲೆ ಹಾಗೂ ಜಾನ್ಸನ್ ಸೇರಿ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor