ಹಲ್ಲೆಗೊಳಗಾದ ಯುವಕ

ಬೀದರ್: ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮೇಲ್ಜಾತಿ ಯುವಕರಿಂದ ದಲಿತ ಯುವಕರ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಸಿದ್ಧು ಬಿರಾದಾರ್, ಶರಣು ಜಾಶೆಟ್ಟಿ, ನಾಗರಾಜ್ ಚನ್ನಮಲ್ಲ, ಸಂಗಮೇಶ್ ಜಾಶೆಟೊ, ಸಂಗಮೇಶ್ ಚನಶೆಟೊ, ವಿಕಾಸ್ ಚಿಲಶೆಟ್ಟಿ, ಬಸವರಾಜ್ ಹತ್ತೆ ಹಾಗೂ ಶ್ರಾವಂತ್ ಬಿರಾದಾರ್ ವಿರುದ್ಧ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಸುಧಾಕರ್ ಬೇಂದ್ರೆ ಅವರ ಪ್ರಕಾರ, ಆದಿ ಜಾಂಬವ ಗಣೇಶ ಯುವಕ ಮಂಡಳಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಮಂಗಳವಾರ ಸಂಜೆ ಗಣಪತಿ ವಿಸರ್ಜನೆ ಮೆರವಣಿಗೆ ಗ್ರಾಮದ ಓಣಿಯಲ್ಲಿರುವ ಶಿಲುಬೆ ಕಟ್ಟೆ ಸಮೀಪಕ್ಕೆ ಬಂದಾಗ ಕೆಲ ಯುವಕರು ಬೈಕ್ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಈ ವೇಳೆ ಬೈಕ್ ನಿಧಾನವಾಗಿ ಚಲಾಯಿಸುವಂತೆ ಅಜಯ್ ಎಂಬ ಯುವಕ ಹೇಳಿದ ವಿಚಾರಕ್ಕೆ ವಾಗ್ವಾದ ಆರಂಭವಾಗಿದ್ದು, ಬಳಿಕ ಇನ್ನೂ ಕೆಲವರು ಸ್ಥಳಕ್ಕೆ ಬಂದು ಜಾತಿ ನಿಂದನೆ ಮಾಡುತ್ತಾ ಕೈ, ಕಡಗ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಯಲ್ಲಿ ಕೆಲ ಯುವಕರ ತಲೆಗೆ ಗಾಯಗಳಾಗಿದ್ದು, ಜಗಳ ಬಿಡಿಸಲು ಮುಂದಾದವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor