×
Ad

ಔರಾದ್ | ನಕಲಿ ಸಹಿ ಮಾಡಿ ಜೆಜೆಎಂ ಕಾಮಗಾರಿ ಹಸ್ತಾಂತರ ಆರೋಪ : ಕ್ರಿಮಿನಲ್ ಪ್ರಕರಣ ದಾಖಲಿಸಲು ಶಾಸಕರಿಗೆ ಒತ್ತಾಯ

Update: 2025-12-29 19:11 IST

ಔರಾದ್ : ತಾಲೂಕಿನ ಚಾಂಡೇಶ್ವರ್ ಗ್ರಾಮದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿಯನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಅಧಿಕಾರಿಗಳು ಅಕ್ರಮ ಮಾಡಿದ್ದಾರೆ. ಪಂಚಾಯತ್ ಅಧ್ಯಕ್ಷರ ನಕಲಿ ಸಹಿ ಮಾಡಿ ಕಾಮಗಾರಿ ಹಸ್ತಾಂತರಿಸಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಗ್ರಾಮಸ್ಥರು ಶಾಸಕ ಪ್ರಭು ಚೌವ್ಹಾಣ ಅವರನ್ನು ಒತ್ತಾಯಿಸಿದರು.

ಗ್ರಾಮ ಸಂಚಾರದ ನಿಮಿತ್ತ ಶಾಸಕ ಪ್ರಭು ಚೌವ್ಹಾಣ್ ಅವರು ಸೋಮವಾರ ಚಾಂಡೇಶ್ವರ್ ಗ್ರಾಮಕ್ಕೆ ಭೇಟಿ ನೀಡಿದ ವೇಳೆ, ಸಾರ್ವಜನಿಕರು ಗ್ರಾಮದಲ್ಲಾದ ಜೆಜೆಎಂ ಕಾಮಗಾರಿಯ ಬಗ್ಗೆ ದೂರುಗಳನ್ನು ಸಲ್ಲಿಸಿದರು.

ತಾವು ಪ್ರಯತ್ನಪಟ್ಟು ಕಾಮಗಾರಿಗಾಗಿ ಕೋಟ್ಯಂತರ ರೂ. ಅನುದಾನ ತಂದಿದ್ದೀರಿ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಕಾಮಗಾರಿಯ ಹಣವನ್ನು ನುಂಗಿ ಹಾಕಿದ್ದಾರೆ. ಅರ್ಧ ಗ್ರಾಮಕ್ಕೆ ನೀರಿನ ಸಂಪರ್ಕವೇ ಕಲ್ಪಿಸಿಲ್ಲ. ಪೈಪ್ ಲೈನ್ ಗಾಗಿ ಕೊರೆದ ತಗ್ಗು ಗುಂಡಿಗಳನ್ನು ಮುಚ್ಚಿಲ್ಲ. ಕೆಲಸ ಮಾಡದೇ ಬಿಲ್ಲುಗಳನ್ನು ಮಾಡಲಾಗಿದೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಸದಸ್ಯರ ಗಮನಕ್ಕೆ ತರದೇ ಅಧ್ಯಕ್ಷರ ನಕಲಿ ಸಹಿ ಮಾಡಿ ಕಾಮಗಾರಿಯನ್ನು ಪಂಚಾಯಿತಿಗೆ ಹಸ್ತಾಂತರಿಸಿದ್ದಾರೆ. ಹಿಂದೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಪ್ರಭಾರದಲ್ಲಿದ್ದ ಸುಭಾಷ, ಜೆಇ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಬೇಕು ಮತ್ತು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಶಾಸಕ ಪ್ರಭು ಚೌವ್ಹಾಣ್, ಜನತೆಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂದು ಸಾಕಷ್ಟು ಪ್ರಯತ್ನಪಟ್ಟು 240 ಕೋಟಿ ರೂ. ಗೂ ಹೆಚ್ಚಿನ ಅನುದಾನ ತಂದಿದ್ದೇನೆ. ಆದರೆ ಎಲ್ಲಿಯೂ ಕೆಲಸ ಸರಿಯಾಗಿ ಆಗಿಲ್ಲ. ಹೋದ ಕಡೆಗಳೆಲ್ಲೆಲ್ಲ ಜೆಜೆಎಂ ಬಗ್ಗೆ ದೂರುಗಳು ಬರುತ್ತಿವೆ‌. ಕುಡಿಯುವ ನೀರಿನ ವಿಷಯದಲ್ಲಿಯೂ ಅಕ್ರಮ ಮಾಡಿದರೆ ಜನತೆಯ ಶಾಪಕ್ಕೆ ಗುರಿಯಾಗುತ್ತೀರಿ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಅಧ್ಯಕ್ಷರ ನಕಲಿ ಸಹಿ ಮಾಡಿ ಮಾಡಿದ್ದಾರೆಂದು ಜನತೆ ಆರೋಪಿಸುತ್ತಿದ್ದಾರೆ. ಇಂತಹ ಕೆಲಸ ಅಕ್ಷಮ್ಯ ಅಪರಾಧ. ಜನತೆಯ ಬೇಡಿಕೆಯಂತೆ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು. ಈ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ನಿರ್ದೇಶನ ನೀಡಿದ ಅವರು, ಈ ಬಗ್ಗೆ ಲಿಖಿತ ದೂರು ಸಲ್ಲಿಸುವಂತೆ ಗ್ರಾಮಸ್ಥರಿಗೆ ತಿಳಿಸಿದರು.

ಕೊಟಗ್ಯಾಳ್, ರಾಂಪೂರ್, ಚಾಂಡೇಶ್ವರ್, ಹುಲಸೂರ್, ಸೋನಾಳವಾಡಿ, ಸೋನಾಳ್, ಹೊರಂಡಿ, ಡಿಗ್ಗಿ ಹಾಗೂ ಡೋಣಗಾಂವ್ (ಎಂ) ಗ್ರಾಮಗಳಲ್ಲಿ ಸಂಚಾರ ನಡೆಸಿ‌ ಸಾರ್ವಜನಿಕರ ಅಹವಾಲು ಆಲಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಮಿತಕುಮಾರ್ ಕುಲಕರ್ಣಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತರಾಯ್ ಕೌಟಗೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಲೋಕೋಪಯೋಗಿ ಉಲಾಖೆ ಎಇಇ ಪ್ರೇಮಸಾಗರ್, ಪಂಚಾಯತ್ ರಾಜ್ ಎಂಜಿನಿಯರಿಗ್ ಇಲಾಖೆಯ ಎಇಇ ಸುನೀಲ್ ಚಿಲ್ಲರ್ಗೆ, ಜೆಸ್ಕಾಂ ಎಇಇ ರವಿ ಕಾರಬಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಾರುತಿ ರಾಠೋಡ್, ಪಿಎಂಜಿಎಸ್‌ವೈ ಎಇಇ ಸುಭಾಷ್ ವಾಗಮಾರೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲಪ್ಪ, ಮುಖಂಡರಾದ ವಸಂತ್ ಬಿರಾದಾರ್, ಧೊಂಡಿಬಾ ನರೋಟೆ, ಶಿವಾಜಿರಾವ್ ಪಾಟೀಲ್ ಮುಂಗನಾಳ್, ಶಿವರಾಜ್ ಅಲ್ಮಾಜೆ, ರಂಗಾರಾವ್ ಜಾಧವ್, ಕಿರಣ್ ಪಾಟೀಲ್, ಬಂಟಿ ರಾಂಪೂರೆ, ರಾಜಕುಮಾರ್ ಅಲಬಿದೆ, ಪ್ರವೀಣ್ ಕಾರಬಾರಿ, ಭರತ್ ಕದಂ ಹಾಗೂ ಗಿರೀಶ್ ಒಡೆಯರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News