×
Ad

ಔರಾದ್ (ಬಿ) ಪುರಸಭೆಯಾಗಿ ಮೇಲ್ದರ್ಜೆಗೆ | ನನ್ನ ನಿರಂತರ ಪ್ರಯತ್ನಕ್ಕೆ ಸಿಕ್ಕ ಯಶಸ್ಸು: ಶಾಸಕ ಪ್ರಭು ಚೌವ್ಹಾಣ್

Update: 2025-10-10 20:44 IST

ಬೀದರ್‌ : ಔರಾದ್ (ಬಿ) ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದ್ದು, ಈ ನಿರ್ಣಯಕ್ಕೆ ಕ್ಷೇತ್ರದ ಜನತೆಯ ಬಹುದಿನದ ಬೇಡಿಕೆ ಈಡೇರಲಾಗಿದೆ ಎಂದು ಶಾಸಕ ಪ್ರಭು ಚೌವ್ಹಾಣ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಔರಾದ್ (ಬಿ) ಪಟ್ಟಣ ಪಂಚಾಯಿತಿ ಪುರಸಭೆ ಆಗಬೇಕೆಂಬುದು ಜನತೆಯ ಬಹುದಿನಗಳ ಕನಸಾಗಿತ್ತು. ನಾನು ಇದಕ್ಕಾಗಿ ಸತತ 10 ವರ್ಷಗಳಿಂದ ನಿರಂತರ ಶ್ರಮಿಸುತ್ತಿದ್ದೇನೆ. ಮುಖ್ಯಮಂತ್ರಿಗಳು, ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ನಿರಂತರ ಪತ್ರ ಬರೆದಿದ್ದು, ಸಾಕಷ್ಟು ಸಲ ಖುದ್ದಾಗಿ ಭೇಟಿ ನೀಡಿ ಮನವಿಗಳನ್ನು ಸಲ್ಲಿಸಿದ್ದೇನೆ ಎಂದಿದ್ದಾರೆ.

ಔರಾದ್ (ಬಿ) ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇದಕ್ಕಾಗಿ ನಿರಂತರ ಒತ್ತಡ ಹಾಕುತ್ತಲೇ ಬಂದಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಕೆಲಸ ತ್ವರಿತವಾಗಿ ಮಾಡಲು ಶ್ರಮಪಟ್ಟಿದ್ದೇನೆ ಎಂದು ಹೇಳಿದ್ದಾರೆ.

ನಾನು ಸಚಿವನಾಗಿದ್ದ ಸಂದರ್ಭದಲ್ಲೇ ಈ ಕೆಲಸವಾಗಬೇಕಿತ್ತು. ಆದರೆ ಜನಸಂಖ್ಯೆ ಕೊರತೆ ಹಾಗೂ ಮತ್ತಿತರ ಕಾರಣಗಳಿಂದ ವಿಳಂಬವಾಗಿತ್ತು. ಈಗ ಎಲ್ಲ ಮಾನದಂಡಗಳನ್ನು ಪೂರೈಸಿದ್ದು, ಎಲ್ಲ ಅಡೆತಡೆಗಳನ್ನು ಸರಿಪಡಿಸಿದ್ದೇನೆ. ವಿಧಾನಸಭೆ ಅಧಿವೇಶನದಲ್ಲಿಯೂ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇನೆ ಎಂದು ತಿಳಿಸಿದ್ದಾರೆ.

ನನ್ನ ಮನವಿಗೆ ಸ್ಪಂದಿಸಿ ಪಟ್ಟಣ ಪಂಚಾಯಿತಿಯನ್ನು ಪುರಭಸೆಯಾಗಿ ಮೇಲ್ದರ್ಜೆಗೆ ಏರಿಸಲು ನಿರ್ಣಯಿಸಿರುವುದಕ್ಕೆ ಮುಖ್ಯಮಂತ್ರಿ, ಪೌರಾಡಳಿತ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಸಂಪುಟದ ಎಲ್ಲ ಸಚಿವರಿಗೂ ಮತ್ತು ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಔರಾದ್ ಮಹಾಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News