ಔರಾದ್ | ಅಂಗಡಿಗಳಿಗೆ ಬೆಂಕಿ : ಸರಕಾರದಿಂದ ಪರಿಹಾರದ ಭರವಸೆ ನೀಡಿದ ಡಾ. ಭೀಮಸೇನರಾವ್ ಶಿಂಧೆ
ಔರಾದ್: ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾದ ಅಂಗಡಿಗಳಿಗೆ ನಿವೃತ್ತ ಅಪರ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಡಾ.ಭೀಮಸೇನರಾವ್ ಶಿಂಧೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬಾಂಡೆ ಅಂಗಡಿ, ಫರ್ನಿಚರ್, ಚಪ್ಪಲಿ, ಕಿರಾಣಿ ಹಾಗೂ ತರಕಾರಿ ಅಂಗಡಿಗಳು ಸೇರಿದಂತೆ ಒಟ್ಟು 11 ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಈ ಸಂದರ್ಭದಲ್ಲಿ ಮಾತನಾಡಿದ ಶಿಂಧೆ ಅವರು, ಅಂಗಡಿ ಮಾಲೀಕರು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ಸರ್ಕಾರದ ವತಿಯಿಂದ ಆದಷ್ಟು ಬೇಗ ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಅಗ್ನಿಶಾಮಕ ದಳದಲ್ಲಿ ಕೇವಲ ಒಂದು ವಾಹನ ಇದ್ದ ಕಾರಣ ಬೆಂಕಿ ನಂದಿಸಲು ವಿಳಂಬವಾಯಿತು ಮತ್ತು ಹಾನಿಯ ಪ್ರಮಾಣ ಹೆಚ್ಚಾಯಿತು ಎಂದು ಮಾಲೀಕರು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಡಾ. ಶಿಂಧೆ, ಔರಾದ್ ಮತ್ತು ಕಮಲನಗರ ತಾಲೂಕುಗಳಿಗೆ ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಲಕ್ಷಾಂತರ ರೂಪಾಯಿ ಮೌಲ್ಯದ ಸರಕು-ಸಾಮಗ್ರಿಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ವ್ಯಾಪಾರವನ್ನೇ ನಂಬಿದ್ದ ನಮ್ಮ ಕುಟುಂಬಗಳು ಈಗ ಬೀದಿಗೆ ಬಂದಿವೆ. ಕೂಡಲೇ ಸರ್ಕಾರ ನಮಗೆ ಆರ್ಥಿಕ ನೆರವು ನೀಡಬೇಕು ಎಂದು ಸಂತ್ರಸ್ತ ಮಾಲಕರು ಕಣ್ಣೀರು ಹಾಕಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚನ್ನಪ್ಪ ಉಪ್ಪೆ, ಮುಖಂಡ ರಾಮಣ್ಣ ವಡಿಯಾರ್, ಪ.ಪಂ ಮಾಜಿ ಅಧ್ಯಕ್ಷ ಸುನಿಲಕುಮಾರ್ ದೇಶಮುಖ, ತಾ.ಪಂ ಮಾಜಿ ಅಧ್ಯಕ್ಷ ನೇಹರು ಪಾಟೀಲ್, ಸೂರ್ಯಕಾಂತ್ ಮಾಲೆ, ತುಕಾರಾಮ್ ಹಸನ್ಮುಖಿ ಹಾಗೂ ಸೂರ್ಯಕಾಂತ್ ಮಮದಾಪೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.