Aurad | ವಿಬಿ-ಜಿ ರಾಮ್-ಜಿ ಯೋಜನೆ ಸದುಪಯೋಗಪಡಿಸಿಕೊಳ್ಳಿ: ಇಒ ಕಿರಣ್ ಪಾಟೀಲ್
ಔರಾದ್: ಗ್ರಾಮೀಣ ಬಡ ಕುಟುಂಬಗಳಿಗೆ ಉದ್ಯೋಗ ಭದ್ರತೆ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್-ಜಿ ಯೋಜನೆಯ ಸೌಲಭ್ಯಗಳನ್ನು ಅರ್ಹ ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್ ತಿಳಿಸಿದ್ದಾರೆ.
ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, ಗ್ರಾಮೀಣ ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ದಿನಗೂಲಿ ಮೊತ್ತವನ್ನು 370 ರೂ. ನಿಂದ 382 ರೂ. ಗೆ ಹೆಚ್ಚಳ ಮಾಡಲಾಗಿದ್ದು, ವಾರ್ಷಿಕ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.
ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್ ಹೊಂದಿರುವ ಒಂದು ಕುಟುಂಬವು ವರ್ಷಕ್ಕೆ ಗರಿಷ್ಠ 47,750 ರೂ. ರವರೆಗೆ ಆದಾಯ ಗಳಿಸುವ ಅವಕಾಶವನ್ನು ಈ ಯೋಜನೆ ಕಲ್ಪಿಸಿದೆ ಎಂದು ತಿಳಿಸಿದರು.
ಯೋಜನೆಯಡಿ ಕೃಷಿ ಚಟುವಟಿಕೆಗಳಿಗೆ 60 ದಿನಗಳ ವಿರಾಮದ ಅವಕಾಶ, ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದರೂ ನಿಗದಿತ ಅವಧಿಯಲ್ಲಿ ಕೆಲಸ ದೊರೆಯದ ಅರ್ಹರಿಗೆ ನಿರುದ್ಯೋಗ ಭತ್ಯೆ, ಮಹಿಳೆಯರಿಗೆ ಸಮಾನ ಉದ್ಯೋಗಾವಕಾಶ ಹಾಗೂ ಕೂಲಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಸೇರಿದಂತೆ ಹಲವು ಕಾರ್ಮಿಕ ಸ್ನೇಹಿ ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆ ಎಂದು ಕಿರಣ್ ಪಾಟೀಲ್ ತಿಳಿಸಿದ್ದಾರೆ.
ಅರ್ಹ ಗ್ರಾಮೀಣ ಕಾರ್ಮಿಕರು ಯೋಜನೆಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.