ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಮತ್ತೊಬ್ಬ ಕೈದಿ ಬಂಧನ

ಭಾಲ್ಕಿ ಬಸ್ ನಿಲ್ದಾಣದ ಬಳಿ ಸೆರೆ; ಮೂರನೇ ಕೈದಿಗಾಗಿ ಪೊಲೀಸರ ಶೋಧ ಮುಂದುವರಿಕೆ

Update: 2026-07-18 19:40 IST

ಸಾಗರ್ ಭೀಮರಾಯ ಹೊಸಮನಿ

ಬೀದರ್/ಕಲಬುರಗಿ : ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಶಿಕ್ಷಾ ಕೈದಿ ಸಾಗರ್ ಭೀಮರಾಯ ಹೊಸಮನಿ (26)ಯನ್ನು ಭಾಲ್ಕಿ ಬಸ್ ನಿಲ್ದಾಣದ ಸಮೀಪ ಶನಿವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ ಎಂದು ಭಾಲ್ಕಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ತಿಳಿಸಿದ್ದಾರೆ.

ಜೈಲಿನಿಂದ ಪರಾರಿಯಾಗಿದ್ದ ಕೈದಿಗಳ ಬಗ್ಗೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಎಚ್ಚರಿಕೆ ನೀಡಲಾಗಿತ್ತು. ಸಾಗರ್ ಭಾಲ್ಕಿ ಕಡೆಗೆ ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾನೆಯಿಂದಲೇ ಬಲೆ ಬೀಸಿದ್ದರು. ಸಂಜೆ ವೇಳೆಗೆ ಆತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆಯ ಪೇದೆ ಮಹೇಶ್, ಧನ್ನೂರು ಪೊಲೀಸ್ ಠಾಣೆಯ ಪೇದೆ ಹರ್ಷವರ್ಧನ್ ಹಾಗೂ ಡಿಎಆರ್ ಪೊಲೀಸ್ ಪೇದೆ ಮಹಾದೇವ ಹೀರೆಮಠ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಕೈದಿಯನ್ನು ಬಂಧಿಸಿದ್ದಾರೆ.

ಘಟನೆಯ ವಿವರ : 

ಕಲಬುರಗಿ ಕೇಂದ್ರ ಕಾರಾಗೃಹದಿಂದ ಜುಲೈ 14ರ ನಸುಕಿನ ಜಾವ ಶಿಕ್ಷಾ ಕೈದಿಗಳಾದ ಸಾಗರ್, ಸಂತೋಷ್ ಹಾಗೂ ಮಸ್ತಾನ್ ಎಂಬ ಮೂವರು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ನನ್ನು ಈಗಾಗಲೇ ಹುಮನಾಬಾದ್ ಸಮೀಪ ಬಂಧಿಸಲಾಗಿದ್ದು, ಇದೀಗ ಸಾಗರ್ ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಪರಾರಿಯಾಗಿರುವ ಮೂರನೇ ಕೈದಿ ಮಸ್ತಾನ್ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News