ಭಾಲ್ಕಿ | ನೀಟ್‌ ಪರೀಕ್ಷೆ : ಗುರುಕುಲದ ವಿದ್ಯಾರ್ಥಿನಿ ಸಾಕ್ಷಿ ಮಾನೆಗೆ 647 ಅಂಕ

ಇಡಬ್ಲ್ಯುಎಸ್‌ ಕೋಟಾದಲ್ಲಿ ರಾಷ್ಟ್ರಮಟ್ಟದಲ್ಲಿ 135ನೇ ರ‍್ಯಾಂಕ್

Update: 2026-07-17 20:43 IST

ಭಾಲ್ಕಿ : ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ ಮಾನೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ 720ಕ್ಕೆ 647 ಅಂಕ ಗಳಿಸಿ, ಸಾಮಾನ್ಯ ಇಡಬ್ಲ್ಯುಎಸ್‌ (EWS) ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 135ನೇ ರ‍್ಯಾಂಕ್‌ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಬಸವರಾಜ್ ಮೊಳಕೀರೆ ತಿಳಿಸಿದ್ದಾರೆ.

ಕಾಲೇಜಿನ ಆದಿತ್ಯ ಬಿರಾಜದಾರ್ 629, ಸಂದೀಪ್ ಪೂಜಾರಿ 612, ಸುಮಿತ್ ಅಂಬಾಟೆ 607, ದೇವಾನಂದ್ ಚಾಟೆ 607, ಪ್ರಜ್ವಲ್ ಕೋರಿ 604, ಶ್ರೇಯಾ ಉಡಚನ 597, ಆದಿತ್ಯ ದಾನಾ 595, ಅರ್ಪಿತಾ 593, ವೈಭವ 592 ಹಾಗೂ ಸಾಂಗವೆ ದತ್ತಾತ್ರಿ 591 ಅಂಕ ಗಳಿಸಿದ್ದು, ಸುಮಾರು 150 ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಎಂಬಿಬಿಎಸ್‌ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ಮಾತ್ರ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡುತ್ತಾರೆ ಎಂಬ ಕಲ್ಪನೆಯನ್ನು ಸಾಕ್ಷಿ ಮಾನೆ ತಮ್ಮ ಸಾಧನೆಯ ಮೂಲಕ ತಪ್ಪು ಎಂದು ಸಾಬೀತುಪಡಿಸಿದ್ದಾರೆ. ಮೊದಲ ತರಗತಿಯಿಂದ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿ ನೀಟ್‌ನಲ್ಲಿ 647 ಅಂಕ ಹಾಗೂ ರಾಷ್ಟ್ರಮಟ್ಟದಲ್ಲಿ 135ನೇ ರ‍್ಯಾಂಕ್ ಗಳಿಸಿರುವುದು ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಸಾಧನೆಗೆ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಉಪ ಪ್ರಾಚಾರ್ಯ ಸಿದ್ರಾಮ್ ಗೊಗ್ಗಾ ಹಾಗೂ ಶೈಕ್ಷಣಿಕ ನಿರ್ದೇಶಕ ಎಂ. ಶ್ರೀನಿವಾಸರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News