ಹುಲಸೂರ್ | ಕುಡಿಯುವ ನೀರಿಗಾಗಿ ದೇವನಾಳ ಗ್ರಾಮಸ್ಥರಿಂದ ಗ್ರಾಮ ಪಂಚಾಯತ್‌ಗೆ ಮುತ್ತಿಗೆ

Update: 2026-07-17 20:34 IST

ಹುಲಸೂರ್ : ದೇವನಾಳ ಗ್ರಾಮದಲ್ಲಿ ಕಳೆದ ಮೂರು ತಿಂಗಳಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕೊಳವೆ ಬಾವಿಯ ಮೋಟಾರ್ ದುರಸ್ತಿಪಡಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಶುಕ್ರವಾರ ಗಡಿಗೌಡಗಾಂವ್ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಬುಟ್ಟಿ ಜಾತ್ರೆ ನಡೆಯುತ್ತಿರುವ ಸಂದರ್ಭದಲ್ಲೇ ಕುಡಿಯುವ ನೀರಿನ ಅಭಾವ ಉಂಟಾಗಿರುವುದರಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆ ವೇಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಚೇರಿಗೆ ಗೈರಾಗಿದ್ದರಿಂದ ಗ್ರಾಮಸ್ಥರ ಆಕ್ರೋಶ ಮತ್ತಷ್ಟು ಹೆಚ್ಚಾಯಿತು. ಬಳಿಕ ಆಗಮಿಸಿದ ಕಂದಾಯ ವಸೂಲಿ ಅಧಿಕಾರಿ, ಗ್ರಾಮಸ್ಥರು ಕಂದಾಯ ಪಾವತಿಸದ ಕಾರಣ ಹಣದ ಕೊರತೆ ಉಂಟಾಗಿದ್ದು, ಕೊಳವೆ ಬಾವಿಯ ಮೋಟಾರ್ ದುರಸ್ತಿಪಡಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ತಾವು ನಿಯಮಿತವಾಗಿ ಕಂದಾಯ ಪಾವತಿಸುತ್ತಿದ್ದರೂ ಗ್ರಾಮದಲ್ಲಿ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮ ಪಂಚಾಯಿತಿ ವಿಫಲವಾಗಿದೆ ಎಂದು ಆರೋಪಿಸಿದರು.

ಕೆಲವು ಸ್ಥಿತಿವಂತರು ಸಾರ್ವಜನಿಕ ನಳಗಳಿಗೆ ಮೋಟಾರ್ ಅಳವಡಿಸಿ ಪೈಪ್‌ಗಳ ಮೂಲಕ ನೇರವಾಗಿ ತಮ್ಮ ಮನೆಗಳಿಗೆ ನೀರು ಪಡೆಯುತ್ತಿದ್ದು, ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬಡವರು ಗಂಟೆಗಟ್ಟಲೆ ನೀರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಅವಧಿ ಮುಗಿದಿದ್ದು, ಪ್ರಸ್ತುತ ಪಂಚಾಯಿತಿಯ ಆಡಳಿತ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಿಡಿಒ ಅವರ ಅಧೀನದಲ್ಲಿದೆ. ಆದರೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಫಲವಾಗಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದೇವನಾಳ ಗ್ರಾಮಸ್ಥರಾದ ಯುವರಾಜ್ ಜಾಮಖಂಡೆ, ಸಂತೋಷ್‌ ಬಿರಾದಾರ್, ಶಕೀಲ್ ಶೇಖ್, ಧಮ್ ಪುಂಡೆ,‌ ಶಕೀಲ್ ಕಲ್ಯಾಣಿವಾಲೆ, ಚಕ್ರಧರ್ ಲದ್ದೆ‌ ಹಾಗೂ ರಾಜು ಕೋರೆ ಸೇರಿದಂತೆ ಗ್ರಾಮದ ಹಲವರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News