Bidar | ಹುಲಸೂರ್, ಬಸವಕಲ್ಯಾಣ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ಪ್ರತಿಭಟನೆ
ಬಸವಕಲ್ಯಾಣ: ಹುಲಸೂರು ಹಾಗೂ ಬಸವಕಲ್ಯಾಣ ತಾಲೂಕುಗಳಲ್ಲಿ ಈ ವರ್ಷ ತೀವ್ರ ಮಳೆಯ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿ ರೈತರು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಬಸವ ಮಹಾಮನೆ ಆವರಣದಿಂದ ತಹಶೀಲ್ದಾರ್ ಕಚೇರಿವರೆಗೆ ಹಲಿಗೆ ಬಾರಿಸುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಬಳಿಕ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅನಿಲ್ ಭೂಸಾರೆ, ಸಾವಿರಾರು ಎಕರೆ ಪ್ರದೇಶಗಳಲ್ಲಿ ಬಿತ್ತನೆಯಾದ ಬೆಳೆಗಳು ಮಳೆಯ ಕೊರತೆಯಿಂದ ಒಣಗಿ ಹೋಗಿವೆ. ಸಾಲ ಮಾಡಿ ಕೃಷಿ ಮಾಡಿದ ರೈತರು ಭಾರೀ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಕೃಷಿ ಚಟುವಟಿಕೆ ಸಂಪೂರ್ಣ ಹಿನ್ನಡೆ ಕಂಡಿದೆ ಎಂದು ಹೇಳಿದರು.
ಇಲ್ಲಿಯವರೆಗೆ ಬಸವಕಲ್ಯಾಣ ಹಾಗೂ ಹುಲಸೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದಿರುವುದು ರೈತರಿಗೆ ಅನ್ಯಾಯವಾಗಿದೆ. ಸರ್ಕಾರ ಕೂಡಲೇ ಎರಡೂ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜೊತೆಗೆ ಬೆಳೆ ನಷ್ಟ ಪರಿಹಾರ, ಬೆಳೆ ವಿಮೆ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಬೇಕು, ಕೃಷಿ ಸಾಲ ಮನ್ನಾ ಮಾಡಬೇಕು ಹಾಗೂ ರೈತರಿಗೆ ಅಗತ್ಯ ನೆರವುಗಳನ್ನು ತಕ್ಷಣ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಆಕಾಶ್ ಖಂಡಾಳೆ, ಸಂತೋಷ್ ಗಾಯಕವಾಡ್, ಪ್ರವೀಣ್ ಕಾಡಾದಿ, ಬಾಲಾಜಿ ಶಿಂಧೆ, ಡಾ. ಬಸವರಾಜ್ ಸ್ವಾಮಿ, ಭಗವಂತ್ ಜನ್ಬಾ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.