ಬರಗಾಲದಲ್ಲಿ ಗ್ರಾಮದಲ್ಲೇ ಉದ್ಯೋಗ: ವಿಬಿ-ಜಿ ರಾಮ್‌ಜಿ ಯೋಜನೆಯ ಲಾಭ ಪಡೆಯಲು ಡಿಸಿ ಕರೆ
ಬೀದರ್, ಜು.17: ಜಿಲ್ಲೆಯಲ್ಲಿನ ಬರಗಾಲದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗ್ರಾಮೀಣ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವ ಅಗತ್ಯವಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಜಾರಿಯಲ್ಲಿರುವ ವಿಬಿ-ಜಿ ರಾಮ್‌ಜಿ ಯೋಜನೆ ಅಡಿಯಲ್ಲಿ ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಗ್ರಾಮ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಿ ಯೋಜನೆಯ ಸೌಲಭ್ಯ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಯೋಜನೆಯಡಿ ಕೇವಲ ಉದ್ಯೋಗವಷ್ಟೇ ಅಲ್ಲದೆ ಗ್ರಾಮೀಣ ಭಾಗದಲ್ಲಿ ಬಾಳಿಕೆ ಬರುವ ಮೂಲಸೌಕರ್ಯಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ. ಫಲಾನುಭವಿಗಳು ತಮ್ಮ ಜೀವಿತಾವಧಿಯಲ್ಲಿ 5 ಲಕ್ಷ ರೂ.ವರೆಗೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಅನುಮೋದಿತ ಕಾಮಗಾರಿಗಳಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಯೋಜನೆಯಡಿ ಜಾನುವಾರು ಶೆಡ್, ಎರೆಹುಳು ತೊಟ್ಟಿ, ತೋಟಗಾರಿಕೆ ವಿಸ್ತರಣೆ, ತೆರೆದ ಬಾವಿ, ಕೃಷಿ ಹೊಂಡ (ಫಾರ್ಮ್ ಪಾಂಡ್) ಸೇರಿದಂತೆ ವಿವಿಧ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬಹುದು. ಸಮುದಾಯ ಕಾಮಗಾರಿಗಳಲ್ಲಿ ಬರ ನಿಯಂತ್ರಣ ಕಾಮಗಾರಿ, ಮಣ್ಣಿನ ಚೆಕ್ ಡ್ಯಾಂ, ಮುಖ್ಯ ಕಾಲುವೆ, ಪ್ರವಾಹ ತಿರುವು ಚರಂಡಿ, ಜಲ ಕೊಯ್ಲು ಹೊಂಡ, ಸಮುದಾಯ ಮೆಟ್ಟಿಲು ಬಾವಿ ಪುನಶ್ಚೇತನ, ನೀರಾವರಿ ಬಾವಿ, ಸರ್ಕಾರಿ ಶಾಲೆಗಳ ಕಂಪೌಂಡ್ ಗೋಡೆ, ಅಡುಗೆ ಕೋಣೆ, ಶೌಚಾಲಯ ನಿರ್ಮಾಣ ಹಾಗೂ ಆಟದ ಮೈದಾನ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಉದ್ಯೋಗ ಪಡೆಯುವ ಅವಕಾಶವಿದೆ ಎಂದು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬಹುದು ಅಥವಾ 82775 06000 ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಶಿಲ್ಪಾ ಶರ್ಮಾ ತಿಳಿಸಿದ್ದಾರೆ.