ಹುಮನಾಬಾದ್ | ಹೊಲಗಳಿಗೆ ತೆರಳುವ ರಸ್ತೆ ತೆರವುಗೊಳಿಸಲು ಗ್ರಾಮಸ್ಥರ ಆಗ್ರಹ
ಹುಮನಾಬಾದ್ : ಹುಡಗಿ ಗ್ರಾಮದ ವ್ಯಾಪ್ತಿಯ ಕಪ್ಪರಗಾಂವ್ ಗ್ರಾಮದ ಹೊಲಗಳು ಹಾಗೂ ಸ್ಮಶಾನ ಭೂಮಿಗೆ ತೆರಳಲು ರಸ್ತೆ ಕಲ್ಪಿಸಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ್ ಅವರ ಮೂಲಕ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಹಿರಿಯ ಮುಖಂಡ ಖಾಜಾ ಪಟೇಲ್ ಮಾತನಾಡಿ, ಹಬೀಬಾಬ ಕುತಬೋದ್ದಿನ್ ಅವರು ಹೊಲಗಳಿಗೆ ತೆರಳುವ ರಸ್ತೆಯನ್ನು ಬಂದ್ ಮಾಡಿರುವುದರಿಂದ ಸರ್ವೆ ನಂ. 88ರಿಂದ 97ರವರೆಗಿನ ಜಮೀನುಗಳಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ರೈತರ ಹಿತದೃಷ್ಟಿಯಿಂದ ರಸ್ತೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಬಂಡೇಪ್ಪ ಜಮಾದಾರ್ ಮಾತನಾಡಿ, ಕೆಕೆಆರ್‌ಡಿಬಿ ಯೋಜನೆಯಡಿ 21 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದ್ದರೂ, ರಸ್ತೆ ಬಳಕೆಗೆ ಅಡಚಣೆ ಉಂಟಾಗಿರುವುದು ರೈತರಿಗೆ ತೀವ್ರ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ್, ರೈತರ ಸಮಸ್ಯೆಯನ್ನು ತಹಸೀಲ್ದಾರ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್ ಮತ್ತು ಭೀಮರಾವ್ ಪಾಟೀಲ್ ಅವರ ಗಮನಕ್ಕೆ ತಂದು ಶೀಘ್ರ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಜಗನ್ನಾಥ್ ರಾಯಪಳ್ಳಿ, ಜುಬೀರಮಿಯಾ ತಾಹೀರಮಿಯ, ಪಾಶಾಮಿಯಾ ರಂಜೋಳ್, ರೇವಣಸಿದ್ದಪ್ಪ, ಆಕಾಶ್, ಆಸೀಫ್, ಶ್ರೀಮಂತ್ ವರ್ಮಾ, ಭೀಮಣ್ಣ ವಾಲಿಕಾರ್, ಸಂತೋಷ್ ಯಾದಗೀರ್, ನೂರಪಾಶಾ ಬಂಬೂಳಗಿ, ಪ್ರಶಾಂತರೆಡ್ಡಿ, ನಬಿಸಾಬ್ ಹಾಗೂ ಫರೀದಸಾಬ್ ವಾಡಿವಾಲಿ ಸೇರಿದಂತೆ ಇತರರು ಇದ್ದರು.