×
Ad

ಔರಾದ್ | ಹಕ್ಕುಪತ್ರಕ್ಕಾಗಿ ಅಲೆಮಾರಿ ಜನಾಂಗದವರ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭ

Update: 2026-01-19 19:50 IST

ಬೀದರ್ (ಔರಾದ್): ನಿವೇಶನ ಮಂಜೂರಾಗಿದ್ದರೂ ಹಕ್ಕುಪತ್ರ ನೀಡದೆ ವಿಳಂಬ ಮಾಡುತ್ತಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿ, ಔರಾದ್ (ಬಾ) ತಾಲೂಕಿನ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಸೋಮವಾರದಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಔರಾದ್ ಪಟ್ಟಣದ ಎಪಿಎಂಸಿ ಮತ್ತು ಸರ್ಕಾರಿ ಗೈರಾಣು ಭೂಮಿಯಲ್ಲಿ ಕಳೆದ 40 ವರ್ಷಗಳಿಂದ 750ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ವಾಸಿಸುತ್ತಿವೆ. ಇವರಿಗೆ ಭೂಮಿ ಮಂಜೂರಾಗಿದ್ದರೂ ಸಹ ಇದುವರೆಗೂ 'ಫಾರಂ ನಂ. 10'ರ ಅಡಿ ಹಕ್ಕುಪತ್ರ ನೀಡಿಲ್ಲ ಹಾಗೂ ಜಾಗದ ಹದ್ದುಬಸ್ತ್ ಮಾಡಿಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ವೆ ನಂ. 183ರ 40 ಎಕರೆ 30 ಗುಂಟೆ ಜಮೀನಿನಲ್ಲಿ 2 ಎಕರೆ ಹಾಗೂ ಸರ್ವೆ ನಂ. 205ರ 50 ಎಕರೆ 11 ಗುಂಟೆ ಜಮೀನಿನಲ್ಲಿ 2 ಎಕರೆ ಭೂಮಿಯನ್ನು ಈ ಜನಾಂಗದವರಿಗಾಗಿ ಈಗಾಗಲೇ ಮಂಜೂರು ಮಾಡಲಾಗಿದೆ. ದಾಖಲೆಗಳಲ್ಲಿ ಭೂಮಿ ಮಂಜೂರಾಗಿದ್ದರೂ, ವಾಸ್ತವದಲ್ಲಿ ಅಧಿಕಾರಿಗಳು ಯಾವುದೇ ಪ್ರಗತಿ ತೋರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಧರಣಿ ಸತ್ಯಾಗ್ರಹಕ್ಕೆ ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದಿಲೀಪಕುಮಾರ್ ವರ್ಮಾ ಅವರು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.

ಧರಣಿಯಲ್ಲಿ ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಶೇಖರ್ ಶೇರಿಕಾರ್, ಔರಾದ್ ತಾಲೂಕು ಅಧ್ಯಕ್ಷ ಪ್ರವೀಣ್ ಕಾರಂಜೆ, ಸಂಪತ್ತ ಸಕ್ಪಾಲ್, ಸಂತೋಷ ಸೂರ್ಯವಂಶಿ, ಸುಂದರ ಮೇತ್ರೆ, ಪ್ರೇಮ ಗೋಡಬೋಲೆ, ದಿನೇಶ ಶಿಂಧೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಹುಲ್ ವಿ. ಖಂದಾರೆ ಸೇರಿದಂತೆ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಜನರು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News