ಔರಾದ್ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯ ಶಾಲಾ ಬ್ಯಾಗ್ ಕಳ್ಳತನ : ಕ್ರಮಕ್ಕಾಗಿ ಆಗ್ರಹ
ಔರಾದ್: ಪಟ್ಟಣದ ಬಸ್ ನಿಲ್ದಾಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ನಿಂತಿರುವ ಪರಿಣಾಮ, ಸೋಮವಾರ ಹಾಡುಹಗಲೇ ವಿದ್ಯಾರ್ಥಿನಿಯೊಬ್ಬರ ಶಾಲಾ ಬ್ಯಾಗ್ ಕಳ್ಳತನವಾಗಿದೆ. ಈ ಭದ್ರತಾ ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಕೋಳ್ಳೂರು ಗ್ರಾಮದ ವಿದ್ಯಾರ್ಥಿನಿ ನಂದಿನಿ ಎಂಬುವವರ ಬ್ಯಾಗ್ ಕಳ್ಳತನವಾಗಿದೆ. ಬ್ಯಾಗ್‌ನಲ್ಲಿ ವಿದ್ಯಾರ್ಥಿನಿಯ ಶೈಕ್ಷಣಿಕ ದಾಖಲೆಗಳು ಹಾಗೂ ಪಠ್ಯಪುಸ್ತಕಗಳಿದ್ದವು ಎನ್ನಲಾಗಿದೆ. ಬ್ಯಾಗ್ ಕಳೆದುಕೊಂಡ ಬಗ್ಗೆ ದೂರು ನೀಡಲು ಮುಂದಾದಾಗ ಬಸ್ ನಿಲ್ದಾಣದ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳು ಹಲವು ದಿನಗಳಿಂದ ದುರಸ್ತಿಯಲ್ಲಿರುವುದು ಕಳ್ಳರಿಗೆ ವರದಾನವಾಗಿದೆ. ಈ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಸರಿಪಡಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಿಸಿಟಿವಿ ಕಾರ್ಯನಿರ್ವಹಿಸಿದ್ದರೆ ಕಳ್ಳನನ್ನು ಪತ್ತೆಹಚ್ಚಲು ಸುಲಭವಾಗುತ್ತಿತ್ತು. ತಕ್ಷಣವೇ ಕ್ಯಾಮೆರಾಗಳನ್ನು ದುರಸ್ತಿ ಮಾಡಬೇಕು ಮತ್ತು ಕರ್ತವ್ಯ ಲೋಪ ಎಸಗಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಮುಖಂಡರಾದ ಚಂದು ಡಿಕೆ, ದತ್ತಾತ್ರಿ ಬಾಪೂರೆ, ಮಹೇಶ್ ಸ್ವಾಮಿ, ರತ್ನಾದೀಪ್ ಕಸ್ತೂರೆ, ಸಂದೀಪ್ ಪಾಟೀಲ್, ಮಲಗೊಂಡ್ ಹಾಗೂ ರೋಹಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.