ಬೀದರ್ | ಬದುಕಿನ ಚಿತ್ರಣದ ಪ್ರತಿ ಗೆರೆಯೂ ವಿವೇಕ ಪ್ರಜ್ಞೆಯಿಂದ ಕೂಡಿರಬೇಕು: ಹಾರಕೂಡ ಶ್ರೀ
ಬೀದರ್: ಅಮೂಲ್ಯವಾದ ಬದುಕಿನ ಚಿತ್ರಣ ರೂಪಿಸಿಕೊಳ್ಳುವಲ್ಲಿ ಪ್ರತಿ ಗೆರೆಯು ಕಲಾತ್ಮಕವಾಗಿಯೂ, ತರ್ಕ ಬದ್ಧವಾಗಿಯೂ ಹಾಗೂ ವಿವೇಕಪ್ರಜ್ಞೆಯಿಂದ ಕೂಡಿರಬೇಕಾಗಿರುವುದು ಅವಶ್ಯಕವಾಗಿದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದಿದ್ದಾರೆ.
ಬಸವಕಲ್ಯಾಣ ತಾಲೂಕಿನ ಕೋಹಿನೂರ ಗ್ರಾಮದ ಚನ್ನಮಲ್ಲೇಶ್ವರ ದೇವಸ್ಥಾನದಲ್ಲಿ ಪ್ರಶಸ್ತಿ ಪ್ರದಾನ, ಗುರುವಂದನೆ ಹಾಗೂ 750ನೇ ತುಲಾಭಾರ ಸೇವೆ ಸಮಾರಂಭ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜಮುಖಿಯಾದ ಸತ್ಕಾರ್ಯಗಳನ್ನು ಮಾಡುವುದರಿಂದ, ಎಲ್ಲೆಡೆ ಜ್ಞಾನದ ಬೆಳಕು ಹರಡಿ ವಿಶ್ವವೇ ಒಂದು ಪರಂಧಾಮವಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಬಸವಾದಿ ಶರಣರ ಶ್ರೇಷ್ಠ ಮೌಲ್ಯಗಳಿಗೆ ಧಕ್ಕೆ ಬಾರದಂತೆ ಶುಭ್ರವಾದ, ಸರಳವಾದ ಜೀವನ ಸಾಗಿಸುವುದೇ ದೈವತ್ವದ ನೈಜ ಗುಟ್ಟು ಎಂದು ಹೇಳಿದರು.
ಸಹ ಬಾಳ್ವಿಗೆ ಹೆಸರಾದ ಭಕ್ತಿ ಪ್ರಧಾನವಾದ ಕೋಹಿನೂರ್ ಗ್ರಾಮ ಕಲೆ, ಸಾಹಿತ್ಯ, ಸಂಗೀತ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮೆರೆದಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದ್ದರು.
ಕೋಹಿನೂರಿನ ಭಕ್ತರೆಲ್ಲರೂ ಸೇರಿ ಸಮರ್ಪಿಸಿದ ಸಮನ್ವಯ ಸಂತ ಪ್ರಶಸ್ತಿಯನ್ನು ಸ್ವೀಕರಿಸಿದ ಅವರು, ಗುರುವಂದನೆ ಹಾಗೂ ತುಲಾಭಾರ ಸೇವೆಯಿಂದ ಹಾರಕೂಡ ಲಿಂಗೈಕ್ಯ ಚನ್ನಬಸವ ಶಿವಯೋಗಿಗಳು ತೃಪ್ತರಾಗಿದ್ದು, ಸದ್ಗುರುವಿನ ಕೃಪಧಾರೆ ಕೋಹಿನೂರಿನತ್ತ ಹರಿದು ಬರಲಿ ಹಾಗೂ ಸರ್ವರಿಗೂ ಮಂಗಳವಾಗಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ, ಅಂಬರಾಯ್ ಉಗಾಜಿ, ಓಂಕಾರ್ ಪಾಟೀಲ್, ವೀರಣ್ಣ ಮೂಲಗೆ, ಮೇಘರಾಜ್ ನಾಗರಾಳೆ, ರಾಜಶ್ರೀ ಹಿತವಂತ, ಮಲ್ಲಿನಾಥ್ ಹಿರೇಮಠ್, ಚಂದ್ರಕಾಂತ್ ಹುಸಗೆ, ಶಿವಾನಂದ್ ಪಾಟೀಲ್ , ಶಿವು ಸೆಟಗಾರ್, ಸಂಜು ಸೂಗರೆ, ರತಿಕಾಂತ್, ಪ್ರಭು ಕಲೋಜಿ, ಆನಂದ್ ಪಾಟೀಲ್, ಹಾಗೂ ಶರಣು ಪವಾಡಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.