ಸರ್ವ ರೋಗಗಳಿಗೆ ಆಯುರ್ವೇದವೇ ಮದ್ದು : ಡಾ.ಶಿವಕುಮಾರ ಸ್ವಾಮಿ
ಬೀದರ್ : ಮಾನವನ ದೇಹದಲ್ಲಿ ಅಡಗಿರುವ ಸರ್ವ ರೋಗಗಳಿಗೆ ಆಯುರ್ವೇದವೇ ಸಂಜೀವಿನಿಯಾಗಿ ಕಾಪಾಡುತ್ತದೆ. ಅದು ಶಾರೀರಕ ಸಧೃಢತೆಯ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡುತ್ತದೆ ಎಂದು ಸಿದ್ಧಾರೂಢ ಚಿದಂಬರ ಆಶ್ರಮದ ಡಾ.ಶಿವಕುಮಾರ್ ಮಹಾಸ್ವಾಮಿ ನುಡಿದರು.
ಇಂದು ಕರ್ನಾಟಕ ಜೀವವೈವಿದ್ಯ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ವೈದ್ಯ ಪರಿಷತ್ತು ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಎನ್.ಕೆ.ಜಾಬಶೆಟ್ಟಿ ಆಯುರ್ವೇದ ಕಾಲೇಜಿನಲ್ಲಿ ಆಯೋಜಿಸಿದ 15ನೇ ಪಾರಂಪರಿಕ ವೈದ್ಯ ಸಮ್ಮೇಳನದ ಜಾಗೃತಿ ಜಾಥಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಆಯುರ್ವೇದ ವೈದ್ಯ, ಒಬ್ಬ ಜ್ಯೋತಿಷಿ ಇದ್ದರೆ ಗ್ರಾಮಕ್ಕೆ ಕಳೆ ಇರುತ್ತದೆ. ಹೀಗಾಗಿ ಪಾರಂಪರಿಕವಾಗಿ ನಡೆದುಕೊಂಡು ಬಂದ ಆಯುರ್ವೇದಕ್ಕೆ ಜನರು ಹೆಚ್ಚು ಮಹತ್ವ ನೀಡಬೇಕು. ಇಂದಿನ ಕಾಲದಲ್ಲಿ ಇಂದು ರೋಗ ಬಂದರೆ ನಾಳೆ ರೋಗ ವಾಸಿಯಾಗಿ ಓಡಾಡುವ ಸ್ಥಿತಿ ಬಂದಿದೆ. ಇದರಿಂದ ಅಡ್ಡ ಪರಿಣಾಮ ಹೆಚ್ಚಾಗಿ ಮನುಷ್ಯನ ಶರೀರ ರೋಗಗಳ ತಾಣವಾಗುತ್ತಿದೆ. ಇದರಿಂದಾಗಿ ಜನರು ಆಯುರ್ವೇದಕ್ಕೆ ಮೊರೆ ಹೋಗಬೇಕು ಎಂದು ಸಲಹೆ ನೀಡಿದರು.
ಡಾ.ಜಗನ್ನಾಥ್ ಹೆಬ್ಬಾಳೆ ಅವರು ಮಾತನಾಡಿ, ಈ ವೈದ್ಯ ಸಮ್ಮೇಳನದ ಆಯೋಜನೆಗೆ ಬಹಳಷ್ಟು ಜನರು ಸಹಕಾರ ನೀಡಿದ್ದಾರೆ. ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಬಲಬೀರಸಿಂಗ್ ಅವರು ತಮ್ಮ ಗುರುನಾನಕನಲ್ಲಿ ಸುಮಾರು 700 ಜನರಿಗೆ ವಸತಿ ವ್ಯವಸ್ಥೆ ನೀಡಿದ್ದಾರೆ. ಡಾ.ಅಬ್ದುಲ್ ಖದೀರ್ ಅವರು ತಮ್ಮ ಕಾಲೇಜಿನಲ್ಲಿ ಸುಮಾರು 500ಕ್ಕೂ ಹೆಚ್ಚು ವೈದ್ಯರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಎಲ್ಲರೂ ಕೂಡಿ ವೈದ್ಯ ಸಮ್ಮೇಳನ ಯಶಸ್ವಿಗೊಳಿಸೋಣ ಎಂದು ಹೇಳಿದರು.
ಪಾರಂಪರಿಕ ವೈದ್ಯ ಸಮ್ಮೇಳನದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಪಾಟೀಲ್ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ್ ವಾಲಿ, ಎನ್.ಕೆ. ಜಾಬಶೆಟ್ಟಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಚಂದ್ರಕಾಂತ್ ಹಳ್ಳಿ, ಕರ್ನಾಟಕ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಪ್ರೊ.ಕಾಶಿನಾಥ್ ನೌಬಾದೆ, ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್, ಗುರುನಾನಕ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಾಮಲಾ ವಿ.ದತ್ತಾ, ದೇವಿದಾಸ್ ತುಮಕುಂಟೆ, ಪ್ರತಿಭಾ ಚಾಮಾ, ಪ್ರಭುಶೆಟ್ಟಿ ಮೂಲಗೆ, ಡಾ.ವಿದ್ಯಾ ಪಾಟೀಲ್, ಡಾ. ಸಂಜೀವಕುಮಾರ್ ಜುಮ್ಮಾ, ಕಲ್ಯಾಣರಾವ್ ಚಳಕಾಪುರೆ, ಡಾ. ರಾಜಕುಮಾರ್ ಹೆಬ್ಬಾಳೆ, ಡಾ. ಸಂಜೀವಕುಮಾರ್ ತಾಂದಳೆ, ನಿಜಲಿಂಗಪ್ಪ ತಗಾರೆ, ಎಸ್.ಬಿ.ಕುಚಬಾಳ್, ಡಾ.ಸುನಿತಾ ಕೂಡ್ಲಿಕರ್ ಹಾಗೂ ಬೀದರ್ ಆಯುರ್ವೇದಿಕ್ ಕಾಲೇಜು, ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ, ಸಿಬ್ಬಂದಿ, ಪಾರಂಪರಿಕ ವೈದ್ಯ ಪರಿಷತ್ತು, ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತಿನ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.