ಬಸವಕಲ್ಯಾಣ: ತಾಲೂಕಿನ ಕೊಹಿನೂರ್ ಹೋಬಳಿಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಬೆಳೆ ವಿಮೆ ಪರಿಹಾರ ಕೊಡಿಸುವುದು ಸೇರಿದಂತೆ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಕೊಹಿನೂರ್ ಗ್ರಾಮಸ್ಥರು ಬುಧವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ, ಕೊಹಿನೂರ್ ಹೋಬಳಿಯಲ್ಲಿ ಭೀಕರ ಬರಗಾಲದಿಂದ ರೈತರು ಬೆಳೆದ ಬೆಳೆಗಳು ಒಣಗಿ ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಬೆಳೆ ವಿಮೆ ಕಂಪನಿಯೊಂದಿಗೆ ಮಾತನಾಡಿ ಮಧ್ಯಂತರ ವಿಮೆ ಪರಿಹಾರವನ್ನು ಬಿಡುಗಡೆ ಮಾಡಿಸಬೇಕು ಎಂದು ಆಗ್ರಹಿಸಿದರು.

ಅದೇ ರೀತಿ, ಕೊಹಿನೂರ್ ಹೋಬಳಿಯಲ್ಲಿ ಕೂಡಲೇ ಮೇವು ಕೇಂದ್ರ ಸ್ಥಾಪಿಸಬೇಕು. ಹೋಬಳಿ ವ್ಯಾಪ್ತಿಯಲ್ಲಿ ಭೀಕರ ಬರಗಾಲದಿಂದ ಹೊಲಗಳಲ್ಲಿ ಹುಲ್ಲು ಕೂಡ ಬೆಳೆದಿಲ್ಲ. ಮಾರುಕಟ್ಟೆಯಲ್ಲಿ ಹುಲ್ಲು ಖರೀದಿಸಲು ಬಡ ರೈತರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಜಾನುವಾರುಗಳಿಗೆ ಮೇವು ಇಲ್ಲದೆ ಉಪವಾಸದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ತಮ್ಮಲ್ಲಿರುವ ಜಾನುವಾರುಗಳನ್ನು ಮಾರಾಟ ಮಾಡುವ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೊಹಿನೂರ್ ಹೋಬಳಿ ಕೇಂದ್ರದಲ್ಲಿ ತಕ್ಷಣ ಮೇವು ಕೇಂದ್ರ ಸ್ಥಾಪಿಸಿ ಜಾನುವಾರುಗಳಿಗೆ ಅಗತ್ಯ ಮೇವು ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಚಂದ್ರಕಾಂತ್ ಹುಸ್ಕೆ, ನರಸಪ್ಪ ಜಮಾದಾರ್, ಆನಂದ್ ಪಾಟೀಲ್, ವೀರಣ್ಣ ಮೂಲಗೆ, ದಿಲೀಪ್ ಜಮಾದಾರ್, ಪ್ರಶಾಂತ್ ಲಕಮಾಜಿ, ಶರಣು ರಾಯಜಿ, ಕರಬಸಯ್ಯ ಸ್ವಾಮಿ, ಶಾಂತು ಅಟ್ಟೂರ್, ಸೋಮಣ್ಣ ಕಲೋಜಿ, ಬಸವರಾಜ ಮಣಕೋಜಿ, ರವಿ ಪರಂಡೆ, ಕಲ್ಯಾಣಿ ನಾಟಿಕರ್, ರಾಮಯ್ಯ ಗುತ್ತೇದಾರ್, ಮಹಾಂತಪ್ಪ ಪಾಟೀಲ್ ಹಾಗೂ ಪ್ರಕಾಶ್ ವರಕಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor