ಬಸವಕಲ್ಯಾಣ | ಆರೋಗ್ಯಕರ ಸಮಾಜಕ್ಕೆ ವಚನ ಸಾಹಿತ್ಯ ಅಧ್ಯಯನ ಅವಶ್ಯಕ : ನ್ಯಾ.ಶಿವಶಂಕರ ಅಮರಣ್ಣನವರ
ಬಸವಕಲ್ಯಾಣ : 12ನೇ ಶತಮಾನದ ಶರಣರು ಸಮಾಜಕ್ಕೆ ಸಾರಿದ ವಚನ ಸಾಹಿತ್ಯವನ್ನು ಕೇವಲ ಬೋಧನೆ ಮತ್ತು ಅಧ್ಯಯನಕ್ಕೆ ಮಾತ್ರ ಸೀಮಿತಗೊಳಿಸದೆ, ಅದರಲ್ಲಿ ಅಡಗಿರುವ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗಲೇ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ ಹೇಳಿದರು.
ನಗರದ ಹರಳಯ್ಯ ಗವಿಯಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಆಯೋಜಿಸಿದ್ದ ಶರಣು–ಶರಣಾರ್ಥಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮಾನವೀಯ ಮೌಲ್ಯಗಳನ್ನು ಒಳಗೊಂಡ ಬದುಕು ಅಗತ್ಯವಾಗಿದ್ದು, ಉತ್ತಮ ಆಡಳಿತಗಾರರಾಗಲು ಸಹ ವಚನ ಸಾಹಿತ್ಯದ ಅಧ್ಯಯನ ಮತ್ತು ಅದರ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಲೋಕಾಯುಕ್ತ ನ್ಯಾಯವಾದಿ ಸಂತೋಷ ನಾಗರಾಳೆ ಮಾತನಾಡಿ, ಶರಣರು ಹಾಗೂ ಸಂತರ ಸಂಗದಿಂದ ತನ್ನ ತಾನರಿತು ದೇವನಾಗುವ ಮಾರ್ಗವನ್ನು ಕಂಡುಕೊಳ್ಳಬಹುದು. “ಶರಣರ ಸಂಗದಿಂದಲಾನು ಪರಮಸುಖಿ” ಎಂದು ಅಕ್ಕ ಮಹಾದೇವಿ ಹೇಳಿದ ಮಾತುಗಳಲ್ಲಿ ಶರಣರ ಸಂಗದ ಮಹಿಮೆ ಅಡಗಿದೆ ಎಂದು ಹೇಳಿದರು.
ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಡಾ.ಗಂಗಾಂಬಿಕಾ ಅಕ್ಕ ಅವರು, ವಚನಗಳು ಜಗತ್ತಿನ ಶ್ರೇಷ್ಠ ಸಂಪತ್ತಾಗಿದ್ದು, ಅವುಗಳ ನಿರಂತರ ಅಧ್ಯಯನದಿಂದ ವ್ಯಕ್ತಿಯ ಮನಸ್ಸಿನ ಮೈಲಿಗೆ ತೊಳೆಯಬಹುದು. ವಚನಗಳ ವೈಭವವನ್ನು ಜಗತ್ತು ಅರಿಯಬೇಕು. ಶರಣ ಸಂಸ್ಕೃತಿ ಬದುಕಲು ಶಕ್ತಿ ನೀಡುತ್ತದೆ. ನಡೆ–ನುಡಿ ಒಂದಾಗಿರಬೇಕು. ಮಕ್ಕಳಲ್ಲಿ ವಚನಗಳ ಮೌಲ್ಯಗಳನ್ನು ಬಿತ್ತುವುದು ಅತ್ಯಂತ ಅಗತ್ಯ ಎಂದು ತಿಳಿಸಿದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ್ ನಾಗರಾಳೆ ಅವರು 2026ರ ದಿನದರ್ಶಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಡಿಪಿಸಿ ನಿರ್ದೇಶಕ ಅನಿಲಕುಮಾರ್ ರಗಟೆ ಅಧ್ಯಕ್ಷತೆ ವಹಿಸಿದ್ದರು. ಡಾ.ನಿವೇದಿತಾ ನಾಗರಾಳೆ, ಶಾಂತಯ್ಯ ಸ್ವಾಮಿ, ಡಾ.ಶೈಲೆಂದ್ರ ವಾಘ್ಮಾರೆ ಉಪಸ್ಥಿತರಿದ್ದರು. ಹರಳಯ್ಯ ಸಮಾಜದ ಅಧ್ಯಕ್ಷ ಶಿವಾಜಿ ಕಾಂಬಳೆ ಧ್ವಜಾರೋಹಣ ನೆರವೇರಿಸಿದರು. ರಂಜನಾ ಭೂಶೆಟ್ಟಿ ಹಾಗೂ ಮಂಜುನಾಥ ವಚನ ಸಂಗೀತ ಕಾರ್ಯಕ್ರಮ ನೀಡಿದರೆ, ಲಲಿತಾ ನಾಗರಾಳೆ ವಚನ ಗಾಯನ ಮಾಡಿದರು. ಕವಿತಾ ರಾಜೋಳೆ ಸ್ವಾಗತಿಸಿದರು, ಜಯಶ್ರೀ ಬಿರಾದಾರ ನಿರೂಪಿಸಿದರು. ಶಿಕ್ಷಕ ಶಾಲಿವಾನ ಕಾಕನಾಳೆ ಪ್ರಸಾದ ದಾಸೋಹ ನಡೆಸಿಕೊಟ್ಟರು.