×
Ad

ಬೇರೊಬ್ಬರ ಮೇಲೆ ಅನ್ಯಾಯ ಮಾಡುವುದೇ ಸಾಧನೆ ಎಂದು ಖಂಡ್ರೆಯವರು ಭಾವಿಸಿದ್ದಾರೆ: ಭಗವಂತ್ ಖೂಬಾ

"ಗೊಡ್ಡು ಬೆದರಿಕೆಗೆ ಹೆದರುವ ಮಗ ನಾನಲ್ಲ"

Update: 2026-02-18 18:24 IST

ಭಗವಂತ್ ಖೂಬಾ, ಈಶ್ವರ್ ಖಂಡ್ರೆ

ಬೀದರ್: ಬೇರೊಬ್ಬರ ಮೇಲೆ ಅನ್ಯಾಯ ಮಾಡುವುದೇ ಈಶ್ವರ್ ಖಂಡ್ರೆ ಅವರು ಸಾಧನೆ ಎಂದು ಭಾವಿಸಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಗವಂತ್ ಖೂಬಾ ಅವರು ಈಶ್ವರ್ ಖಂಡ್ರೆ ಅವರಿಗೆ ನಿಂದಿಸಿದ್ದಾರೆ ಎಂದು ಆರೋಪಿಸಿ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯವರಿಗೆ ಅಭಿವೃದ್ಧಿ ಬಗ್ಗೆ, ಅವರ ಪಾಪದ ಕೆಲಸಗಳ ಬಗ್ಗೆ ಪ್ರಶ್ನಿಸಿದರೆ ಇಂತಹ ಘನಂದಾರಿ ಕೆಲಸ ಮಾಡುತ್ತಿದ್ದಾರೆ. ಖಂಡ್ರೆ ಅವರು ನಮ್ಮ ಕಾರ್ಯಕರ್ತರ ಮೇಲೆ ಪೊಲೀಸರನ್ನು ಬಿಟ್ಟು ಪೂಜೆ ಮಾಡಲು ಬಿಡಲಿಲ್ಲ. ಆ ಘೋರ ಪಾಪ ಮಾಡಿರುವ ಬಗ್ಗೆ ಪ್ರಶ್ನಿಸಿದರೆ, ನನ್ನ ಮೇಲೆ ಭಾಲ್ಕಿಯಲ್ಲಿ ಎಫ್ಐಆರ್ ಮಾಡಿಸಿದ್ದಾರೆ ಎಂದು ಅವರು ಗುಡುಗಿದ್ದಾರೆ.

ಇಂಥ ಕೆಲಸ ಕಳೆದ ಮೂರ್ನಾಲ್ಕು ದಶಕಗಳಿಂದ ಅವರು ಮಾಡಿಕೊಂಡು ಬರ್ತಿದ್ದಾರೆ. ಮೊದಲು ಕಾರ್ಯಕರ್ತನಿಂದ ನನಗೆ ಕೊಲೆ ಬೆದರಿಕೆ ಹಾಕಿಸುತ್ತಾರೆ. ಕೈ ಕಾಲು, ನಾಲಿಗೆ ಕಡಿಯುವುದಾಗಿ ಧಮಕಿ ಹಾಕಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನನ್ನ ಮಾನ ಹರಣ ಮಾಡಿಸುತ್ತಾರೆ. ಆದರೂ ಅವನ ಮೇಲೆ ಪೊಲೀಸರು ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇಷ್ಟೆಲ್ಲ ಆದರೂ ನಾನು ಸತ್ಯದ ಪರವಾಗಿ ನಿಂತಿದ್ದೇನೆ. ಖಂಡ್ರೆಯವರ ಇಂಥ ಗೊಡ್ಡು ಬೆದರಿಕೆಗೆ ಹೆದರುವ ಮಗ ನಾನಲ್ಲ. ನಾನು ಕಾನೂನು ಹೋರಾಟ ಮಾಡುತ್ತೇನೆ ಎನ್ನುವ ವಿಷಯ ಎಲ್ಲರಿಗೂ ತಿಳಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News