ಭಾಲ್ಕಿ | ಮನೆ ಬೀಗ ಮುರಿದು 10.25 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ : ಪ್ರಕರಣ ದಾಖಲು
Update: 2025-09-18 20:17 IST
ಬೀದರ್: ಭಾಲ್ಕಿ ನಗರದಲ್ಲಿ ಬುಧವಾರ ಮಧ್ಯಾಹ್ನ ಮನೆಯೊಂದರ ಬೀಗ ಮುರಿದು 14 ತೊಲೆ ಚಿನ್ನ ಮತ್ತು 50 ತೊಲೆ ಬೆಳ್ಳಿ ಆಭರಣ ಕಳ್ಳತನವಾದ ಘಟನೆ ನಡೆದಿದೆ.
ಬಾಲಾಜಿ ನಗರದ ನಿವಾಸಿ ಜಾಲಿಂದರ್ ಅವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ. ಜಾಲಿಂದರ್ ಶಿಕ್ಷಕರಾಗಿದ್ದು, ಬುಧವಾರ ಕಲ್ಯಾಣ ಕರ್ನಾಟಕ ಧ್ವಜಾರೋಹಣದ ನಿಮಿತ್ತ ಶಾಲೆಗೆ ತೆರಳಿದ್ದರು. ಮಕ್ಕಳು ಸಹ ಶಾಲೆಯಲ್ಲಿ ಇದ್ದರು. ಇದೇ ವೇಳೆ ಜಾಲಿಂದರ್ ಅವರ ಪತ್ನಿ ಕಾರ್ಯಕ್ರಮಕ್ಕೆ ಹೋಗಿದ್ದಾಗ, ಕಳ್ಳರು ಮನೆ ಬೀಗ ಮುರಿದು ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಕಳವಾದ ಆಭರಣಗಳಲ್ಲಿ 14 ತೊಲೆ 1 ಗ್ರಾಂ ಚಿನ್ನದ ಆಭರಣ (ಮೌಲ್ಯ 9,85,400 ರೂ.) ಮತ್ತು 50 ತೊಲೆ ಬೆಳ್ಳಿ ಆಭರಣ (ಮೌಲ್ಯ 40,000 ರೂ.) ಆಗಿದ್ದು, ಒಟ್ಟು 10,25,400 ರೂ. ಮೌಲ್ಯದ ಆಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.